ಅನಿರ್ದಿಷ್ಟಾವಧಿ ಧರಣಿ, ಕಚೇರಿ ಕೆಲಸಕ್ಕೆ ಸಮಸ್ಯೆ

ಜಿಲ್ಲಾಧಿಕಾರಿ, ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದ ತಹಸೀಲ್ದಾರ್ ಹಾಬಲಕಟ್ಟಿ ಭೋವಿ ಜನರಿಂದ ಹೋರಾಟ
ಕುಷ್ಟಗಿ ತಹಸಿಲ್ ಕಚೇರಿ ಆವರಣದಲ್ಲಿ ಹಾಬಲಕಟ್ಟಿ ಭೋವಿ ಸಮುದಾಯದ ಜನರು ಧರಣಿ ಮುಂದುವರಿಸಿರುವುದು. ಸಮಾಜದ ರಾಜ್ಯಾಧ್ಯಕ್ಷ ಲಕ್ಷ್ಮಣ ಭೋವಿ, ತಾಲೂಕು ಅಧ್ಯಕ್ಷ ಹನುಮಂತಪ್ಪ ಭೋವಿ, ಮಹೇಶ ಒಡೆಯರ್ ಇತರರಿದ್ದರು.
ಕುಷ್ಟಗಿ ತಹಸಿಲ್ ಕಚೇರಿ ಆವರಣದಲ್ಲಿ ಹಾಬಲಕಟ್ಟಿ ಭೋವಿ ಸಮುದಾಯದ ಜನರು ಧರಣಿ ಮುಂದುವರಿಸಿರುವುದು. ಸಮಾಜದ ರಾಜ್ಯಾಧ್ಯಕ್ಷ ಲಕ್ಷ್ಮಣ ಭೋವಿ, ತಾಲೂಕು ಅಧ್ಯಕ್ಷ ಹನುಮಂತಪ್ಪ ಭೋವಿ, ಮಹೇಶ ಒಡೆಯರ್ ಇತರರಿದ್ದರು.
Published on: 

ಕುಷ್ಟಗಿ: ಎಸ್ಸಿ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಒತ್ತಾಯಿಸಿ ತಹಸಿಲ್ ಕಚೇರಿ ಮುಂದೆ ಹಾಬಲಕಟ್ಟಿಯ ಭೋವಿ ಸಮುದಾಯದ 50ಕ್ಕೂ ಹೆಚ್ಚು ಜನರು ಟೆಂಟ್ ಹಾಕಿಕೊಂಡು ಅ.5ರಿಂದ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದಾರೆ. ಹೋರಾಟದಿಂದ ಕಚೇರಿ ಕೆಲಸಕ್ಕೆ ಅಡ್ಡಿಯಾಗುತ್ತಿದ್ದು, ಅನುಮತಿಯೂ ಪಡೆದಿಲ್ಲವೆಂದು ಇದೀಗ ತಹಸೀಲ್ದಾರ್ ಅವರು ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಕಚೇರಿಯ ಆವರಣದಲ್ಲಿ ಟೆಂಟ್ ಹಾಕಿಕೊಂಡು ಮಹಿಳೆಯರು, ಮಕ್ಕಳು ಸೇರಿ ಐವತ್ತಕ್ಕೂ ಅಧಿಕ ಜನ ಇಲ್ಲೇ ವಾಸ್ತವ್ಯ ಹೂಡಿದ್ದಾರೆ. ಬಟ್ಟೆಗಳನ್ನು ತೊಳೆದು ಕಚೇರಿಯ ಮುಂದೆ ಹಾಕುವುದು, ಅಡುಗೆ ಮಾಡುವುದು, ಕರ್ತವ್ಯದ ವೇಳೆ ಹಲಗೆ ಬಾರಿಸುತ್ತಿರುವುದರಿಂದ ಕಿರಿಕಿರಿಯಾಗುತ್ತಿದೆ. ಅಲ್ಲದೇ ಅವರಿಗೆ ಪ್ರತಿಭಟನೆ ನೆಡಸಲು ಅನುಮತಿ ಕೂಡಾ ನೀಡಿಲ್ಲ. ಧರಣಿ ನಡೆಸದಂತೆ ಹಲವಾರು ಬಾರಿ ತಿಳಿ ಹೇಳಿದರೂ ಪ್ರಯೋಜನವಾಗಿಲ್ಲ. ಕೆಲಸದ ಅವಧಿಯಲ್ಲಿ ಮಕ್ಕಳನ್ನು ಕಚೇರಿಯ ತುಂಬ ಓಡಾಡಲು ಬಿಡುತ್ತಾರೆ. ಹೀಗಾಗಿ ಜಿಲ್ಲಾಧಿಕಾರಿ ಮತ್ತು ಪೋಲಿಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ತಹಸೀಲ್ದಾರ್ ಅಶೋಕ ಶಿಗ್ಗಾವಿ ತಿಳಿಸಿದ್ದಾರೆ.

ನಮ್ಮದು ಕಾನೂನು ಬದ್ದ ಹೋರಾಟ

ಹಾಬಲಕಟ್ಟಿ ಗ್ರಾಮದ ಭೋವಿ ಸಮುದಾಯದವರು ನೈಜ ಮೂಲ ಭೋವಿಗಳಾಗಿದ್ದು ಕಾನೂನಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ರಾಜ್ಯ ಭೋವಿ ಸಮಾಜದ ಅಧ್ಯಕ್ಷ ಲಕ್ಷ್ಮಣ ಭೋವಿ, ತಾಲೂಕು ಅಧ್ಯಕ್ಷ ಶರಣಪ್ಪ ಭೋವಿ ತಿಳಿಸಿದರು. ಈ ಹಿಂದೆ ಎಸ್ಸಿ ಪ್ರಮಾಣಪತ್ರವನ್ನು ನೀಡುತ್ತಿದ್ದ ಕಂದಾಯ ಇಲಾಖೆ ಈಗ ಕೊಡಲು ಬರುವುದಿಲ್ಲ ಎಂದರೆ ಹೇಗೆ? ಏನೇ ಆಗಲಿ ನ್ಯಾಯ ಸಿಗುವವರೆಗೆ ನಾವು ನಮ್ಮ ಹೋರಾಟ ಬಿಡುವುದಿಲ್ಲ.

ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಧರಣಿ ಕೈಗೊಂಡಿದ್ದೇವೆ. ಅವರು ರಾಜಕೀಯ ನಾಯಕರ ಗೊಂಬೆಯಾಗಿದ್ದಾರೆ ಎಂದು ದೂರಿದ್ದು, ಪ್ರತಿಭಟನಾಕಾರರಿಗೆ ಕನಿಷ್ಠ ಕುಡಿವ ನೀರಿನ ಸೌಲಭ್ಯವನ್ನೂ ಕಲ್ಪಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಹನುಮಂತಪ್ಪ ಭೋವಿ, ಮಹೇಶ ಒಡೆಯರ್, ಮುತ್ತಪ್ಪ ಭೋವಿ ಇತರರಿದ್ದರು.

ಹಾಬಲಕಟ್ಟಿಯ ಭೋವಿ ಸಮುದಾಯಕ್ಕೆ ಎಸ್ಸಿ ಪ್ರಮಾಣ ಪತ್ರ ನೀಡಲು ಬರುವುದಿಲ್ಲ, ಕಾನೂನಿನಲ್ಲಿ ಅವಕಾಶ ಇಲ್ಲ. ಅಲ್ಲದೆ ಅವರು ಅನುಮತಿ ಇಲ್ಲದೆ ಧರಣಿ ಕೈಗೊಂಡಿದ್ದು, ಕರ್ತವ್ಯಕ್ಕೆ ಸಮಸ್ಯೆಯಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಅಶೋಕ ಶಿಗ್ಗಾವಿ, ತಹಸೀಲ್ದಾರ್, ಕುಷ್ಟಗಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net