ಕೊಪ್ಪಳದ ಸರ್ವೋದಯ ಗ್ರಾಮೀಣ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ವಿಶ್ವ ಶ್ರವಣ ದಿನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಕಿವಿ ತಪಾಸಣಾ ಶಿಬಿರದಲ್ಲಿ ಇಎನ್‌ಟಿ ತಜ್ಞ ಡಾ. ಅವಿನಾಶ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಯನ್ನು ಪರೀಕ್ಷಿಸುತ್ತಿರುವುದು.
ಕೊಪ್ಪಳ: ಯಾವುದೇ ಮಗು ಶ್ರವಣದೋಷ ಅಥವಾ ಕಿವುಡುತನದಿಂದ ಭವಿಷ್ಯದಲ್ಲಿ ಹಿಂದೆ ಉಳಿಯಬಾರದು. ಸಮುದಾಯದ ಪ್ರತಿಯೊಬ್ಬರೂ ಕಿವಿ ಆರೋಗ್ಯದ ಬಗ್ಗೆ ನಿಗಾವಹಿಸುವುದು ಅಗತ್ಯ ಎಂದು ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಪ್ರಕಾಶ ಎಚ್. ತಿಳಿಸಿದರು.
ನಗರದ ಸರ್ವೋದಯ ಗ್ರಾಮೀಣ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ವಿಶ್ವ ಶ್ರವಣ ದಿನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಕಿವಿ ತಪಾಸಣಾ ಶಿಬಿರದಲ್ಲಿ ವಾತನಾಡಿದರು.
ಕಿವಿ ಪಂಚೇಂದ್ರಿಯಗಳಲ್ಲಿ ಪ್ರಮುಖ ಅಂಗ. ಕಿವಿಯಲ್ಲಿ ಕಡ್ಡಿ ಹಾಕುವುದು, ಎಣ್ಣೆ ಬಿಡುವುದು ಅಥವಾ ನಕಲಿ ವೈದ್ಯರಿಂದ ಗುಗ್ಗೆ ತೆಗೆಸುವ ಸಾಹಸ ವಾಡಬಾರದು. ಕಲುಷಿತ ನೀರಿನಲ್ಲಿ ಈಜಬಾರದು ಹಾಗೂ ವೈದ್ಯರ ಸಲಹೆ ಇಲ್ಲದೆ ಕಿವಿಗೆ ಯಾವುದೇ ಔಷಧ ಹಾಕಬಾರದು. 2 ವರ್ಷದೊಳಗಿನ ಮಕ್ಕಳಿಗೆ ಶ್ರವಣದೋಷವಿದ್ದಲ್ಲಿ ಸರ್ಕಾರದಿಂದ ಉಚಿತ ಶಸಚಿಕಿತ್ಸೆ ಸೌಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದರು.
ಇಎನ್‌ಟಿ ತಜ್ಞರಾದ ಡಾ. ಅವಿನಾಶ ವಾತನಾಡಿ, ನವಜಾತ ಶಿಶುಗಳ ಕಿವಿಯ ಆರೈಕೆ ಮತ್ತು ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಕಾರ್ಯಕ್ರಮದಡಿ ಸಿಗುವ ಸೌಲಭ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಚಾರ್ಯ ನಿಂಗಪ್ಪ ಗದ್ದಿಗೇರಿ ವಾತನಾಡಿ, ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದ್ದು, ಇಲ್ಲಿ ಕಲಿತ ವಿಷಯಗಳನ್ನು ವಿದ್ಯಾರ್ಥಿಗಳು ತಮ್ಮ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ತಿಳಿಸಿ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ., ಆಡಿಯೋಲಾಜಿಸ್ಟ್ ಬಿಂದು, ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ಶ್ರೀನಿವಾಸ, ಆರೋಗ್ಯ ನಿರೀಕ್ಷಣಾಧಿಕಾರಿ ಲೋಹಿತ, ಆಶಾ ಕಾರ್ಯಕರ್ತೆಯರು ಇತರರಿದ್ದರು.