ನೀಗುವುದೇ ಹೂಳಿನ ಗೋಳು ?

ಕೊಪ್ಪಳ ತಾಲೂಕಿನ ಮುನಿರಾಬಾದ್​ ಟಿಬಿ ಡ್ಯಾಂ.
ಕೊಪ್ಪಳ ತಾಲೂಕಿನ ಮುನಿರಾಬಾದ್​ ಟಿಬಿ ಡ್ಯಾಂ.
Published on

ಪ್ರಮುಖ ಮುಖ್ಯಾಂಶಗಳು

  • ಟಿಬಿ ಡ್ಯಾಂ ಸಮಸ್ಯೆಗಳ ಚರ್ಚೆಗೆ ಸದವಕಾಶ
  • ಗೇಟ್​ ಕ್ರೆಡಿಟ್​ಗಿಂತ ರೈತರ ಹಿತ ಮುಖ್ಯ
ಕೊಪ್ಪಳ : ತ್ರಿವಳಿ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ ಬದಲಾವಣೆ ಕ್ರೆಡಿಟ್​ ಪಡೆಯಲು ವೇದಿಕೆ ಸಜ್ಜುಗೊಂಡಿದೆ. ಜನರ ಒತ್ತಾಸೆಯಂತೆ 33 ಸ್ಪಿಲ್​ವೇ ಗೇಟ್​ ಬದಲಾಯಿಸಿದ್ದು ಉತ್ತಮ ಬೆಳವಣಿಗೆ. ಆದರೆ, ಆಣೆಕಟ್ಟೆಯಲ್ಲಿ ಭರ್ತಿಯಾದ ಹೂಳಿಗೆ ಪರ್ಯಾಯ ಕ್ರಮಗಳ ಬೇಡಿಕೆ ದಶಕಗಳಿಂದ ನನೆಗುದಿಗೆ ಬಿದ್ದಿದೆ. ಜೂ.25ರಂದು ಆಂಧ್ರ, ತೆಲಂಗಾಣ ರಾಜ್ಯದ ಸಿಎಂಗಳೂ ಆಗಮಿಸಲಿದ್ದು, ನವಲಿ ಸಮಾನಾಂತರ ಜಲಾಶಯ ಹಾಗೂ ಪರ್ಯಾಯ ಕ್ರಮಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧತೆ ಪ್ರದರ್ಶಿಸಬೇಕಿದೆ.
133 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 28 ಟಿಎಂಸಿ ಹೂಳು ತುಂಬಿದೆ. ಯೋಜನಾ ಲೆಕ್ಕಾಚಾರದಂತೆ ಪ್ರತಿವರ್ಷ 0.5 ಟಿಎಂಸಿಯಷ್ಟು ಹೂಳು ಬರಲಿದೆ ಎಂದು ಅಂದಾಜಿಸಲಾಗಿದೆ. ತುಂಗಭದ್ರಾ ನದಿ ಪಾತ್ರದ ಎಡ&ಬಲ ಬದಿಗೆ ಅಪಾರ ಕೈಗಾರಿಕೆಗಳು ಹರಡಿಕೊಂಡಿವೆ. ಮೈನಿಂಗ್​ ಸೇರಿ ಇನ್ನಿತರ ಕಾರಣಗಳಿಗೆ ನಿಗದಿಗಿಂತ ಹೆಚ್ಚಿನ ಹೂಳು ಜಲಾಶಯದ ಒಡಲು ಸೇರುತ್ತಿದೆ. ತಕ್ಷಣಕ್ಕೆ ಪರ್ಯಾಯ ಕ್ರಮ ಜರುಗಿಸದೇ ಹೋದಲ್ಲಿ ಭವಿಷ್ಯದಲ್ಲಿ ಕುಡಿವ ನೀರಿಗಷ್ಟೇ ಡ್ಯಾಂ ಸೀಮಿತವಾಗಲಿದೆ ಎಂಬುದು ತಜ್ಞರ ಎಚ್ಚರಿಕೆ.
2013ರಲ್ಲೇ ನವಲಿ ಸಮಾನಾಂತರ ಜಲಾಶಯಕ್ಕೆ ಪೂರ್ವ ಯೋಜನಾ ವರದಿ ರಚಿಸಿದ ಸರ್ಕಾರ, ನಂತರದಲ್ಲಿ ಯೋಜನಾ ವೆಚ್ಚ ಹೆಚ್ಚಾಯಿತೆಂಬ ನೆಪ ನೀಡಿ ವರದಿ ಮೂಲೆ ಸೇರಿಸಿದೆ. ಟಿಬಿ ಡ್ಯಾಂ ಅಂತಾರಾಜ್ಯ ನೀರಾವರಿ ಯೋಜನೆಯಾಗಿದ್ದು, ಏನೇ ಕಾಮಗಾರಿ, ಪ್ರಮುಖ ರ್ನಿಣಯ ಕೈಗೊಳ್ಳಬೇಕೆಂದರೆ ಟಿಬಿ ಬೋರ್ಡ್​ ಸಮ್ಮತಿ ಕಡ್ಡಾಯ. ಮೂರು ರಾಜ್ಯಗಳು ಇದಕ್ಕೆ ಸಂಪೂರ್ಣ ಒಪ್ಪಿಗೆ ನೀಡಬೇಕು. ಅನುದಾನವನ್ನು ಒದಗಿಸಬೇಕು. ಜಲಾಶಯ ಕರ್ನಾಟಕದಲ್ಲಿದ್ದು, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಮೂಲಕ ಹರಿವ ತುಂಗಭದ್ರಾ ಮುಂದೆ ಸಮುದ್ರ ಸೇರುತ್ತದೆ.
ಮೇಲ್ಭಾಗದಲ್ಲಿ ನೀರು ಹಿಡಿದಿಡಲು ಹತ್ತಾರು ಕಾನೂನುಗಳ ಅಡೆತಡೆ ಇದೆ. ಇದನ್ನೇ ವರವಾಗಿಸಿಕೊಂಡಿರುವ ನೆರೆ ರಾಜ್ಯಗಳು ಟಡಿಬಿ ಡ್ಯಾಂ ವಿಷಯದಲ್ಲಿ ರಾಜ್ಯ ಸರ್ಕಾರ ಕೈಗೊಳ್ಳುವ ರ್ನಿಣಯಗಳಿಗೆ ಸಮ್ಮತಿ ಸೂಚಿಸುತ್ತಿಲ್ಲ. ರಾಜ್ಯ ಸರ್ಕಾರ ಹಾಗೂ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಭಾಗದ ಜನಪ್ರತಿನಿಧಿಗಳು ಈ ವಿಷಯವಾಗಿ ಸರ್ಕಾರದ ಮೂಗು ಹಿಡಿದು ಕೆಲಸ ಮಾಡಿಸಿಕೊಳ್ಳುವಷ್ಟು ಬದ್ಧತೆ ಪ್ರದರ್ಶಿಸುತ್ತಿಲ್ಲ. ಮಾತೆತ್ತಿದರೆ ಇದೊಂದು ಅಂತಾರಾಜ್ಯ ಯೋಜನೆ. ಈ ಬಗ್ಗೆ ಆಂಧ್ರ, ತೆಲಂಗಾಣ ಸಿಎಂಗಳ ಜೊತೆ ಮಾತನಾಡುತ್ತೇವೆ ಎಂಬ ಹಳಸಿದ ಸುದ್ದಿಯನ್ನೇ ಹೊಸ ಬೆಳವಣಿಗೆ ಎಂಬಂತೆ ಹೇಳಿಕೊಂಡು ದಿನದೂಡುತ್ತಿದ್ದಾರೆ.

ಬಜೆಟ್​ಗೆ ಸೀಮಿತ

ನವಲಿ ಸಮಾನಾಂತರ ವಿಷಯ ಕೇವಲ ಬಜೆಟ್​ಗೆ ಸೀಮಿತಗೊಂಡಿದೆ. ಅಧಿಕಾರದಲ್ಲಿರುವ ಕಾಂಗ್ರೆಸ್​, ಹಿಂದೆ ಅಧಿಕಾರ ಅನುಭವಿಸಿದ ಬಿಜೆಪಿ, ಜೆಡಿಎಸ್​ ಸಮ್ಮಿಶ್ರ ಸರ್ಕಾರಗಳೂ ಪ್ರತಿ ವರ್ಷ ಬಜೆಟ್​ನಲ್ಲಿ ನವಲಿ ಸಮಾನಾಂತರ ಯೋಜನೆ ವಿಷಯ ಪ್ರಸ್ತಾಪಿಸತ್ತಿವೆ. 100 ಕೋಟಿ ಅನುದಾನ ಒದಗಿಸಲಾಗಿದೆ ಎಂದೆಲ್ಲ ಹಗಲಿನಲ್ಲೇ ರೈತರಿಗೆ ನಕ್ಷತ್ರ ತೋರಿಸುವ ಕೆಲಸ ಮಾಡುತ್ತಾ ಬಂದಿವೆ. ಸದ್ಯ ಅಧಿಕಾರಸ್ಥ ಕಾಂಗ್ರೆಸ್​ ಸಹ ಮೂರು ಬಜೆಟ್​ನಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದು, ಬಾಕಿ ಎರಡು ವರ್ಷದಲ್ಲಾದರೂ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಅನುಷ್ಠಾನಕ್ಕೆ ಚಾಲನ ನೀಡುವ ಬದ್ಧತೆ ಪ್ರದರ್ಶಿಸಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಪ್ರತ್ಯೇಕ ಸಭೆ ನಡೆಸಲಿ

ಸಿಎಂ ಡಿ.ಕೆ.ಶಿವಕುಮಾರ್​ ಹಿಂದೆ ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ್ದು, ತುಂಗಭದ್ರಾ ಸಮಸ್ಯೆಗಳ ಬಗ್ಗೆ ಅರಿವಿದೆ. ಇಷ್ಟು ವರ್ಷ ಆಂಧ್ರ, ತೆಲಂಗಾಣ ಸಿಎಂಗಳು ಹಾಗೂ ನೀರಾವರಿ ಸಚಿವರು, ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಜೂ.25ರಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ರೇವಂತ್​ ರೆಡ್ಡಿ ಸೇರಿ ಆಯಾ ರಾಜ್ಯದ ಜಲಸಂಪನ್ಮೂಲ ಸಚಿವರು, ಸರ್ಕಾರದ ಉನ್ನತ ಅಧಿಕಾರಿಗಳು ಆಗಮಿಸಲಿದ್ದಾರೆ. ಟಿಬಿ ಬೋರ್ಡ್​ ಅಧಿಕಾರಿಗಳೂ ಹಾಜರಿರುವರು. ಇದೊಂದು ಸದವಕಾಶವಾಗಿದ್ದು, ಅಲ್ಲೇ ಪ್ರತ್ಯೇಕ ಸಭೆ ನಡೆಸಿ ಮೂರು ರಾಜ್ಯದ ರೈತರ ಹಿತದೃಷ್ಟಿಯಿಂದ ಉತ್ತಮ ರ್ನಿಣಯ ಕೈಗೊಂಡಲ್ಲಿ ಶತಮಾನದ ಇತಿಹಾಸವೊಂದು ನಿರ್ಮಾಣವಾಗಲಿದೆ.

ಇತಿಹಾಸ ಸೇರಿದ ಹಳೇಯ ಗೇಟ್​

ತುಂಗಭದ್ರಾ ಜಲಾಶಯ ನಿರ್ಮಾಣಗೊಂಡಾಗ ಅಳವಡಿಸಿದ್ದ 33 ಸ್ಪಿಲ್​ ವೇ ಗೇಟ್​ಗಳು 70 ವರ್ಷದಷ್ಟು ಹಳೆಯದಾಗಿವೆ. 51 ಕೋಟಿ ರೂ. ಮೊತ್ತದಲ್ಲಿ ಹೊಸ ಗೇಟ್​, ಚೈನ್​ ಅಳವಡಿಕೆ ಮಾಡಲಾಗಿದೆ. ಮುಂದಿನ 50 ವರ್ಷದವರೆಗೆ ಗೇಟ್​ಗಳು ಸುರತವಾಗಿರಲಿವೆ. ಡ್ಯಾಂ ನಿರ್ಮಾಣ ವೇಳೆ ಅಳವಡಿಸಿದ ಗೇಟ್​ಗಳು ಗುಜರಿ ಸೇರಿವೆ. ಕೊನೆಯದಾಗಿ ತೆರವು ಮಾಡಿದ ಹಳೇ ಗೇಟ್​ ಟಿಬಿ ಡ್ಯಾಂನಲ್ಲೇ ಪ್ರದರ್ಶನಕ್ಕೆ ಇಡಲು ಬೋರ್ಡ್​ ನಿರ್ಧರಿಸಿದೆ. ಈ ಮೂಲಕ ಇತಿಹಾಸ ದಾಖಲಿಸುವ ಕೆಲಸ ಮಾಡಿರುವುದು ಶ್ಲಾನೀಯ.

ಎಡದಂಡೆ ನಾಲೆಗೂ ಬೇಕು ಬಲ

ಮೂರು ರಾಜ್ಯದ ಲಾಂತರ ಎಕರೆ ಪ್ರದೇಶಕ್ಕೆ ನೀರುಣಿಸುವ ಟಿಬಿ ಡ್ಯಾಂ, ಕುಡಿವ ನೀರು, ಇನ್ನಿತರ ಯೋಜನೆಗಳಿಗೆ ಆಸರೆಯಾಗಿದೆ. ರಾಜ್ಯದಲ್ಲಿ 6ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿಗೆ ಜೀವ ಜಲವಾಗಿದೆ. ಕೊಪ್ಪಳ&ರಾಯಚೂರು ಭಾಗಕ್ಕೆ ನೀರುಣಿಸುವ ಎಡದಂಡೆ ನಾಲೆ 227 ಕಿ.ಮೀ. ಉದ್ದವಿದ್ದು ಜಲಾಶಯ ನಿರ್ಮಾಣ ಕಾಲದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಅಲ್ಲಿಂದ ಈವರೆಗೆ ಒಮ್ಮ ಮಾತ್ರ ಆಧುನೀಕರಣಗೊಂಡಿದೆ. ಪರಿಣಾಮ ಅಕ್ವಡೆಕ್ಟ್​ಗಳು, ಟನಲ್​ಗಳು, ಕಾಲುವೆಯ ಎಡ&ಬಲ ದಂಡೆ ಭಾಗ ಶಕ್ತಿ ಕಳೆದಕೊಂಡಿವೆ. ಆಗಾಗ ಒಡೆದು ಅಪಾರ ಹಾನಿ ಸಂಭವಿಸುತ್ತಿದೆ. ಅದನ್ನು ಆಧುನೀಕರಣಗೊಳಿಸಿದಲ್ಲಿ ಮತ್ತಷ್ಟು ಬಲ ಬರಲಿದೆ.
"

ಡಿಬಿ ಡ್ಯಾಂ ಎಲ್ಲ ಕ್ರಸ್ಟ್​ಗೇಟ್​ ಬದಲಾಯಿಸಲಾಗಿದೆ. ಜೂ.25ರಂದು ಆಂಧ್ರ, ತೆಲಂಗಾಣ ಸಿಎಂಗಳು ಹಾಗೂ ಕೇಂದ್ರ ಜಲಶಕ್ತಿ ಸಚಿವರು, ಅಧಿಕಾರಿಗಳು ಆಗಮಿಸಲಿದ್ದು, ಹೊಸ ಕ್ರಸ್ಟ್​ ಗೇಟ್​ ಲೋಕಾರ್ಪಣೆಗೊಳಿಸಲಾಗುವುದು. ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಸೇರಿ ರಾಜ್ಯದ ಕೃಷ್ಣ ಸೇರಿ ಇನ್ನಿತರ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಯತ್ನಿಸಲಾಗುವುದು. ಈ ಬಗ್ಗೆ ಸಿಎಂ ಗಮನ ಸೆಳೆಯುವ ಕೆಲಸ ಮಾಡುವೆ.

— ರಾಮಲಿಂಗಾರೆಡ್ಡಿ. ಜಲಸಂಪನ್ಮೂಲ ಸಚಿವ.

"

ಜೂ.25ರಂದು ಮುನಿರಾಬಾದ್​ನಲ್ಲಿ ಟಿಬಿ ಡ್ಯಾಂ ಕ್ರಸ್ಟ್​ ಗೇಟ್​ ಲೋಕಾರ್ಪಣೆ ಕಾರ್ಯಕ್ರಮ ನಿಗದಿಯಾಗಿದೆ. ಮೂರು ರಾಜ್ಯದ ಸಿಎಂ ಆಗಮಿಸಲಿದ್ದಾರೆ. ಈ ಬಗ್ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಮ್ಮ ರಾಜ್ಯದಿಂದ ನಿಯೋಗವೊಂದು ಆಂಧ್ರ, ತೆಲಂಗಾಣ ಸಿಎಂಗಳಿಗೆ ಆಹ್ವಾನಿಸಲು ತೆರಳಿದೆ.

— ಡಾ.ಸುರೇಶ ಬಿ.ಇಟ್ನಾಳ. ಕೊಪ್ಪಳ ಡಿಸಿ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net