ನಿರ್ವಹಣೆ ಇಲ್ಲದೆ ಮದ್ಯ ವ್ಯಸನಿಗಳ ತಾಣವಾದ ಹಿಟ್ನಾಳ ಬಸ್ ತಂಗುದಾಣ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ
ಬಸ್ ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲು ಆಗ್ರಹ
ಮುನಿರಾಬಾದ್: ಸಮೀಪದ ಹಿಟ್ನಾಳ ಹೋಬಳಿ ಕೇಂದ್ರದ ಬಸ್ ನಿಲ್ದಾಣಕ್ಕೆ ಸುಸಜ್ಜಿತ ಕಟ್ಟಡವಿದ್ದರೂ ಬಸ್‌ಗಳ ಸಂಚಾರವಿಲ್ಲದೇ ಅನಾಥವಾಗಿದೆ.
ಕೊಪ್ಪಳ ವಿಭಾಗದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಶೇಷ ಅಭಿವೃದ್ಧಿ ಯೋಜನೆಯಡಿ ಲಕ್ಷಾಂತರ ರೂ. ಖರ್ಚುಮಾಡಿ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣ ನಿರ್ಮಿಸಿದ್ದು, ಬಸ್‌ಗಳು ನಿಲ್ದಾಣಕ್ಕೆ ಬರುವುದಿಲ್ಲ. ಈ ಮಾರ್ಗವಾಗಿ ಕಡಿಮೆ ಬಸ್‌ಗಳು ಸಂಚರಿಸುವುದರಿಂದ ನಿಲ್ದಾಣದ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.
ಸರ್ಕಾರಿ ಬಸ್ ನಿಲ್ದಾಣ ಸಂಜೆ ವೇಳೆ ಮದ್ಯಪಾನ, ಧೂಮಪಾನ ವ್ಯಸನಿಗಳ ತಾಣವಾಗುತ್ತದೆ. ಸಾರ್ವಜನಿಕ ಸೇವೆಗೆ ಇರಬೇಕಾದ ನಿಲ್ದಾಣ ಅವ್ಯವಸ್ಥೆಯಿಂದ ವ್ಯಸನಿಗಳ ಗೂಡಾಗಿದೆ. ಅಧಿಕಾರಿಗಳು ಈ ವ್ಯವಸ್ಥೆ ಕಂಡು ಕಾಣದಂತಿದ್ದಾರೆ.
ಹಿಟ್ನಾಳ ಹೋಬಳಿ ಕೇಂದ್ರ 24 ಗ್ರಾಮಗಳನ್ನು ಒಳಗೊಂಡಿದ್ದು, ಸಾರ್ವಜನಿಕರು, ವ್ಯಾಪಾರಸ್ಥರು, ವಿದ್ಯಾರ್ಥಿಗಳು ಸರ್ಕಾರಿ ಸೌಲಭ್ಯ ಪಡೆಯಲು ನಿತ್ಯ ಭೇಟಿ ನೀಡುತ್ತಾರೆ. ಆದರೆ, ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಸರ್ಕಾರಿ ಕಚೇರಿ ಕೆಲಸಗಳಿಗೆ ತೆರಳಲು ಪರದಾಡುವಂತಾಗಿದೆ.
ಸಂಬಂಧಿಸಿದ ಅಧಿಕಾರಿಗಳು ಕೂಡಲೇ ನಿಲ್ದಾಣದಲ್ಲಿ ಬಸ್‌ಗಳು ಬರುವಂತೆ ನಿರ್ವಹಣೆ ಮತ್ತು ಹೆಚ್ಚುವರಿ ಬಸ್‌ಗಳನ್ನು ಬಿಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಾರ್ವಜನಿಕ ಆಸ್ತಿಹಾನಿ
ಅಧಿಕಾರಿಗಳ ನಿರ್ಲಕ್ಷ್ಯದಿಂದ ಲಕ್ಷಾಂತರ ರೂ. ವೆಚ್ಚದ ಸಾರ್ವಜನಿಕ ಬಸ್ ನಿಲ್ದಾಣದ ಬಾಗಿಲು, ಕಿಟಕಿ ಸೇರಿ ಹಲವು ಪರಿಕರಗಳು ಹಾನಿಯಾಗಿವೆ. ಆದ್ದರಿಂದ ಬಸ್ ನಿಲ್ದಾಣದ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು.