ಹೊಸ ನಿಯಮಾವಳಿಗಳನ್ವಯ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ವಿಶೇಷ ಕಾಳಜಿ ತ್ಯಾಜ್ಯಗಳಾದ ಬಲ್ಬ್, ಬ್ಯಾಟರಿ, ಅವಧಿ ಮೀರಿದ ಔಷಧಿ, ಪೇಂಟ್ ಡಬ್ಬಿ ಮೊದಲಾದವುಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಸಂಗ್ರಹಣೆ, ಸಾಗಣೆ ಮತ್ತು ವಿಲೇವಾರಿ ಮಾಡಬೇಕು. ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವ ಘಟಕಗಳನ್ನು ಗುರುತಿಸಿ ನೋಂದಾಯಿಸಬೇಕು. ಅಂತಹ ಸ್ಥಳಗಳಲ್ಲಿಯೇ ತ್ಯಾಜ್ಯ ಸಂಸ್ಕರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಮನೆಮಟ್ಟದಲ್ಲಿ ಕಾಂಪೋಸ್ಟಿಂಗ್ ಹಾಗೂ ಬಯೋಗ್ಯಾಸ್ ಉತ್ಪಾದನೆಗೆ ಪ್ರೋತ್ಸಾಹ ನೀಡಿ. ಸ್ವಚ್ಛತೆ ಮತ್ತು ಆರೋಗ್ಯಕರ ಪರಿಸರ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಸಾರ್ವಜನಿಕರಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ವ್ಯಾಪಕ ಜಾಗೃತಿ ಮೂಡಿಸಿ ಜಿಲ್ಲೆಯಾದ್ಯಂತ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.