ಕೊಪ್ಪಳದಲ್ಲಿ ನೀರಿನ ಹಾಹಾಕಾರ

ಕೊಪ್ಪಳ ನಗರದ 12ನೇ ವಾರ್ಡ್​ನಲ್ಲಿನ ನೀರಿಲ್ಲದೆ ಒಣಗಿದ ಟ್ಯಾಂಕರ್​ ದೃಶ್ಯ.
ಕೊಪ್ಪಳ ನಗರದ 12ನೇ ವಾರ್ಡ್​ನಲ್ಲಿನ ನೀರಿಲ್ಲದೆ ಒಣಗಿದ ಟ್ಯಾಂಕರ್​ ದೃಶ್ಯ.
Published on

ಪ್ರಮುಖ ಮುಖ್ಯಾಂಶಗಳು

  • ಎಂಟು ದಿನಕ್ಕೊಮ್ಮೆ ನೀರು
  • ನಗರಸಭೆ ರ್ನಿಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಕೊಪ್ಪಳ : ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದಂತೆ, ಕುಡಿಯುವ ನೀರಿನ ಅಭಾವವು ಸಾರ್ವಜನಿಕರನ್ನು ಹೈರಾಣಾಗಿಸಿದೆ. ನಗರದ 11 ಮತ್ತು 12ನೇ ವಾರ್ಡ್​ಗಳು ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಹನಿ ನೀರಿಗಾಗಿ ಜನ ಅಲೆಯುವ ಪರಿಸ್ಥಿತಿ ನಿಮಾರ್ಣವಾಗಿದ್ದು, ಅಧಿಕಾರಿಗಳ ಮೌನ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ 11 ಮತ್ತು 12ನೇ ವಾರ್ಡ್​ ಹಾಗೂ ವಿಜಯನಗರ ಬಡಾವಣೆಯಲ್ಲಿ ನೀರಿನ ಸಮಸ್ಯೆ ಭೀಕರ ಸ್ವರೂಪ ಪಡೆದಿದೆ. ಇಲ್ಲಿನ ನಿವಾಸಿಗಳಿಗೆ ಪ್ರತಿ ಎಂಟು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಇಷ್ಟು ದೀರ್ಘ ಅಂತರದಲ್ಲಿ ನೀರು ಪೂರೈಕೆಯಾಗುತ್ತಿರುವುದರಿಂದ ದಿನಬಳಕೆಗೆ ನೀರಿಲ್ಲದೆ ಜನ ಸಂಕಫ್ಟಿಕ್ಕೀಡಾಗಿದ್ದಾರೆ. ಬಿಸಿಲಿನ ಬೇಗೆಯಿಂದ ಹನಿ ನೀರಿಗಾಗಿ ಕೊಡ ಹಿಡಿದು ಲೋಮೀಟರ್​ಗಟ್ಟಲೆಅಲೆಯುವಂತಾಗಿದೆ.
ನಗರದ ವ್ಯಾಪ್ತಿಯಲ್ಲಿ ನಗರಸಭೆ ಜವಾಬ್ದಾರಿಯಿದ್ದರೆ, ನಗರಕ್ಕೆ ಹೊಂದಿಕೊಂಡಿರುವ ಮತ್ತು ಗ್ರಾಮೀಣ ಭಾಗದ ಸಂಪರ್ಕವಿರುವ ಪ್ರದೇಶಗಳಲ್ಲಿ ತಾಪಂ ಕೂಡ ಸಮರ್ಪಕ ನೀರು ಪೂರೈಸುವಲ್ಲಿ ವಿಫಲವಾಗಿದೆ. ವಿಜಯನಗರ ಬಡಾವಣೆಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕವು ಕಳೆದ ಒಂದು ವರ್ಷದಿಂದ ಬೀಗ ಹಾಕಲ್ಪಟ್ಟಿದೆ. ಬೇಸಿಗೆಯ ಈ ಸಂಕಷ್ಟದ ಸಮಯದಲ್ಲಿಯಾದರೂ ಈ ಘಟಕವನ್ನು ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದ್ದ ನಗರಸಭೆ ಅತೀವವಾಗಿ ರ್ನಿಲಕ್ಷ್ಯ ತೋರುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಬಿಸಿಲು ಹೆಚ್ಚಾಗುತ್ತಿದ್ದಂತೆ ನೀರಿನ ಬೇಡಿಕೆಯೂ ಹೆಚ್ಚಿದೆ. ಕೂಡಲೇ ಮುಚ್ಚಲ್ಪಟ್ಟ ನೀರಿನ ಘಟಕಗಳನ್ನು ಮರುಪ್ರಾರಂಭಿಸಬೇಕು ಮತ್ತು ನೀರಿನ ಪೂರೈಕೆಯ ದಿನಗಳ ಅಂತರವನ್ನು ಕನಿಷ್ಠ ಪಕ್ಷ 2&-3 ದಿನಗಳಿಗೆ ಇಳಿಸಬೇಕು. ನಗರಸಭೆ ಈ ಕೂಡಲೇ ಎಚ್ಚೆತ್ತುಕೊಂಡು ತುರ್ತು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ನಾಗರಿಕರು ಎಚ್ಚರಿಸಿದ್ದಾರೆ.
"

ವಾರಕ್ಕೊಮ್ಮೆ ನೀರು ಬಿಡುತ್ತಿರುವುದರಿಂದ ಅಷ್ಟು ದೀರ್ಘಕಾಲದವರೆಗೆ ನೀರನ್ನು ಸೇಖರಿಸಿದರೆ ನೀರಿನಲ್ಲಿ ಹುಳುಗಳಾಗುತ್ತವೆ. ಮೊದಲೆ ಹೊಳೆ ನೀರು ಕಲುಷಿತವಾಗಿವೆ. ಆ ನೀರನ್ನು ವಾರಗಟ್ಟಲೆ ಸಂಗ್ರಹಿಸಿ ಕುಡಿದರೆ ಕಾಯಿಲೆ ಬರುತ್ತದೆ. ಹಾಗಾಗಿ ನೀರನ್ನು ಎರಡು-ಮೂರು ದಿನಕ್ಕೊಮ್ಮೆಯಾದರೂ ಬಿಟ್ಟರೆ ಅನುಕೂಲವಾಗುತ್ತದೆ.

"

ನಮಗೆ ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ. ಮನೆಯ ಪಕ್ಕದಲ್ಲೇ ನೀರಿನ ಘಟಕವಿದ್ದರೂ ನಾವೀಗ ಕಿಲೋಮೀಟರ್​ ದೂರ ಹೋಗಿ ನೀರು ತರಬೇಕು ಇಲ್ಲವೇ ಖಾಸಗಿ ಟ್ಯಾಂಕರ್​ಗಳಿಗೆ ಹಣ ತೆರಬೇಕು. ನಗರಸಭೆ ಈ ಶುದ್ಧ ಕುಡಿಯುವ ನೀರಿನ ಟಕವನ್ನು ಬೇಸಿಗೆ ಇರುವ ಕಾರಣ ಆದಷ್ಟು ಬೇಗನೆ ರಿಪೇರಿ ಮಾಡಿ ಜನರಿಗೆ ಅನುಕೂಲ ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net