ಕಾರ್ಮಿಕರ ಕಲ್ಯಾಣ ನಿಧಿ ಕಾರ್ಮಿಕರಿಗೇ ಬಳಸಿ

ಕಟ್ಟಡ ಮತ್ತು ಇತರೆ ನಿಮಾರ್ಣ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೊಪ್ಪಳದಲ್ಲಿ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದಿಂದ ತಾಲೂಕು ಕಾರ್ಮಿಕ ಅಧಿಕಾರಿ ಮಂಜುಳಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎ. ದೇವದಾಸ್​, ಪದಾಧಿಕಾರಿಗಳಾದ ಶರಣು ಗಡ್ಡಿ, ಸುರೇಶ ದಳಪತಿ, ಕುಮಾರ್​ ಡಿ.ಇದ್ದರು.
ಕಟ್ಟಡ ಮತ್ತು ಇತರೆ ನಿಮಾರ್ಣ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೊಪ್ಪಳದಲ್ಲಿ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದಿಂದ ತಾಲೂಕು ಕಾರ್ಮಿಕ ಅಧಿಕಾರಿ ಮಂಜುಳಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎ. ದೇವದಾಸ್​, ಪದಾಧಿಕಾರಿಗಳಾದ ಶರಣು ಗಡ್ಡಿ, ಸುರೇಶ ದಳಪತಿ, ಕುಮಾರ್​ ಡಿ.ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎ. ದೇವದಾಸ್​ ಆಗ್ರಹ
ಕೊಪ್ಪಳ : ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿ ಕಾರ್ಮಿಕರ ಸ್ವತ್ತಾಗಿದ್ದು, ಅದನ್ನು ಸಾಮಾಜಿಕ ಭದ್ರತೆ, ಆರೋಗ್ಯ, ಶಿಕ್ಷಣ ಹಾಗೂ ನಿವೃತ್ತಿ ಜೀವನದ ರಕ್ಷಣೆಗೆ ಮಾತ್ರ ಬಳಸಬೇಕು ಎಂದು ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎ. ದೇವದಾಸ್​ ಒತ್ತಾಯಿಸಿದರು.
ಕಟ್ಟಡ ಮತ್ತು ಇತರೆ ನಿಮಾರ್ಣ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ರಾಜ್ಯದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿರುವ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾಗಿರುವ ನಿಧಿಯನ್ನು ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿ ಬಳಸುತ್ತಿರುವುದು ಖಂಡನೀಯ. ಮೇಸನ್​ ಕಿಟ್​, ಸೇಫ್ಟಿ ಕಿಟ್​ ಹಾಗೂ ಶೈಕ್ಷಣಿಕ ಕಿಟ್​ಗಳ ಹೆಸರಿನಲ್ಲಿ ವಸ್ತುಗಳನ್ನು ವಿತರಿಸುವ ಬದಲು ಆ ಹಣವನ್ನು ನೇರವಾಗಿ ಕಾರ್ಮಿಕರ ಬ್ಯಾಂಕ್​ ಖಾತೆಗೆ ಜಮಾ ಮಾಡಬೇಕು ಎಂದರು.
2021ರ ಆದೇಶದಂತೆ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯ ಯೋಜನೆಯನ್ನು ಮರುಜಾರಿಗೊಳಿಸಬೇಕು. ನೋಂದಾಯಿತ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ರಾಜ್ಯಾದ್ಯಂತ ಗುಣಮಟ್ಟದ ನಗದುರಹಿತ ವೈದ್ಯಕಿಯ ಚಿಕಿತ್ಸೆ ಒದಗಿಸಬೇಕು. 60 ವರ್ಷ ಪೂರ್ಣಗೊಂಡ ಬಳಿಕ ಪಿಂಚಣಿಗೆ ಅರ್ಜಿ ಸಲ್ಲಿಸುವ ಅವಧಿಗೆ ವಿಧಿಸಿರುವ ನಿರ್ಬಂಧಗಳನ್ನು ರದ್ದುಪಡಿಸಿ ಎಲ್ಲ ಅರ್ಹರಿಗೆ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ ಮಾತನಾಡಿ, ಸರ್ಕಾರ ಘೋಷಿಸಿರುವ ಎಲ್ಲ ಕಲ್ಯಾಣ ಯೋಜನೆಗಳು ಪ್ರತಿಯೊಬ್ಬ ಅರ್ಹ ಕಟ್ಟಡ ಕಾರ್ಮಿಕನಿಗೂ ತಲುಪುವಂತೆ ಕ್ರಮ ಕೈಗೊಳ್ಳಬೇಕು. ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ, ಧರಣಿ, ಪ್ರತಿಭಟನೆ ಹಾಗೂ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಸ್ಪತ್ರೆ ಆವರಣದಿಂದ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿದ ಕಾರ್ಮಿಕರು, ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕೊಪ್ಪಳ ತಾಲೂಕು ಕಾರ್ಮಿಕ ಅಧಿಕಾರಿ ಮಂಜುಳಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಮುಖಂಡರಾದ ಸುರೇಶ ದಳಪತಿ, ಕುಮಾರ್​ ಡಿ., ನಾಗರಾಜ್​ ಹುಲಗಿ, ಶಬ್ಬೀರ್​ ಕುಲುಮಿ, ಚಂದ್ರಶೇಖರ, ಮೊದಿನ್​, ಯಲ್ಲನಗೌಡ, ಯಮನೂರ, ಮುರ್ತೆಪ್ಪ, ಬಾಬು, ಶರಣಪ್ಪ, ಯಲ್ಲಪ್ಪ, ಶರೀಫ್​, ಕಟ್ಟೆಪ್ಪ, ಅಂಬಣ್ಣ, ಮುಬೀನ್​, ಶಂಕರ, ಗಂಗಮ್ಮ, ಹನುಮವ್ವ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net