ಹುಲಿಗಿಯಲ್ಲಿ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ತುಂಗಭದ್ರಾ ನದಿ ಕಲುಷಿತ

ತುಂಗಭದ್ರಾ ನದಿ ತೀರದಲ್ಲಿ ರಾಶಿ ರಾಶಿಗಟ್ಟಲೇ ಕಸ ಹಾಕಿರುವುದು.
ತುಂಗಭದ್ರಾ ನದಿ ತೀರದಲ್ಲಿ ರಾಶಿ ರಾಶಿಗಟ್ಟಲೇ ಕಸ ಹಾಕಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಉತ್ತರ ಕರ್ನಾಟಕದ ಪ್ರಸಿದ್ಧ ಶಕ್ತಿ ಕ್ಷೇತ್ರ
  • ಆಡಳಿತ ಮಂಡಳಿ ತಾತ್ಸಾರ
  • ಪರಿಸರ ಪ್ರೇಮಿಗಳು ಮತ್ತು ಸ್ಥಳೀಯರು ತೀವ್ರ ಆಕ್ರೋಶ
ಕನಕರಾಯ ನಾಯಕ ಮುನಿರಾಬಾದ್
ಆಡಳಿತ ಮಂಡಳಿ ತಾತ್ಸಾರದ ಪರಿಣಾಮ ಹುಲಿಗಿಯ ಹುಲಿಗೆಮ್ಮ ದೇವಿ ಕ್ಷೇತ್ರದಲ್ಲಿನ ತ್ಯಾಜ್ಯವನ್ನು ಅವೈಜ್ಞಾನಿಕ ವಿಲೇವಾರಿ ಮಾಡುತ್ತಿರುವುದರಿಂದ ತುಂಗಭದ್ರಾ ನದಿ ಗಂಭೀರವಾಗಿ ಕಲುಷಿತಗೊಳ್ಳುತ್ತಿದೆ.
ಉತ್ತರ ಕರ್ನಾಟಕದ ಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲಿ ಒಂದಾದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಆದರೆ, ಕ್ಷೇತ್ರದಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಘಟಕದ ಕೊರತೆ ಎದ್ದು ಕಾಣುತ್ತಿದೆ.
ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸ್ಥಳೀಯ ಆಡಳಿತವು ತ್ಯಾಜ್ಯವನ್ನು ಸಮರ್ಪಕ ನಿರ್ವಹಣೆ ಮಾಡದ ಕಾರಣ ಪೂಜಾ ಸಾಮಗ್ರಿ, ಪ್ಲಾಸ್ಟಿಕ್, ದೇವಸ್ಥಾನಕ್ಕೆ ಬಂದ ಭಕ್ತರು ಸ್ನಾನ ಮಾಡಿ ಬಿಟ್ಟ ಬಟ್ಟೆಗಳು ಸೇರಿದಂತೆ ಅಪಾರ ಪ್ರಮಾಣದ ತ್ಯಾಜ್ಯವನ್ನು ನೇರವಾಗಿ ನದಿಗೆ ಎಸೆಯಲಾಗುತ್ತಿದೆ.
ಇದರಿಂದಾಗಿ ಹುಲಿಗಿ ಸಮೀಪದಲ್ಲಿ ಹರಿಯುವ ತುಂಗಭದ್ರಾ ನದಿಯ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತಿದ್ದು, ನದಿ ನೀರು ಸಂಪೂರ್ಣ ಮಲಿನವಾಗುತ್ತಿದೆ. ಬಹುತೇಕ ಗ್ರಾಮಗಳು ಮತ್ತು ನಗರಗಳು ಕುಡಿವ ನೀರಿಗೆ ಇದೇ ನದಿಯನ್ನು ಅವಲಂಬಿಸಿವೆ. ತುಂಗಭದ್ರಾ ನದಿಯನ್ನು ಕಲುಷಿತಗೊಳಿಸುತ್ತಿರುವ ಬಗ್ಗೆ ನದಿ ಅಕ್ಕಪಕ್ಕದ ಗ್ರಾಮಸ್ಥರು,
ಪರಿಸರ ಪ್ರೇಮಿಗಳು ಮತ್ತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಧಿಕಾರವು ಕೂಡಲೇ ಪ್ರತ್ಯೇಕ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಬೇಕಿದೆ. ಈ ಮೂಲಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಿದೆ. ತುಂಗಭದ್ರಾ ನದಿ ರಕ್ಷಣೆಗೆ ಈಗಿಂದಲೇ ಕಾರ್ಯಪ್ರವೃತ್ತರಾಗಬೇಕಿದೆ.
ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನಗಳಂದು ರಾಜ್ಯದ ವಿವಿಧ ಭಾಗಗಳಲ್ಲದೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರದಿಂದಲೂ ಹೆಚ್ಚಿನ ಸಂಖ್ಯೆ ಭಕ್ತರು ಬರುತ್ತಾರೆ. ವಿಶೇಷ ವಾರದ ದಿನಗಳಂದು ಹುಲಿಗಿಯ ವಾತಾವರಣ ಜಾತ್ರೆಯಂತೆ ಇರುತ್ತದೆ.
ಈ ಮೊದಲಿಗೆ ಹೊಸಳ್ಳಿಯ ತ್ಯಾಜ್ಯ ಸಂಸ್ಕರಣಾ ಘಟಕ್ಕೆ ವಿಲೇವಾರಿ ಮಾಡಲಾಗುತ್ತಿತ್ತು. ಆದರೆ, ಅದು ಸ್ಥಗಿತಗೊಂಡ ಕಾರಣ ನದಿ ದಡದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ಕುಡಿವ ನೀರು ಕಲುಷಿತಗೊಳ್ಳುವುದರ ಜತೆ ನದಿಯಲ್ಲಿನ ಜಲಚರಗಳಿಗೆ ಕಂಟಕವಾಗಿದೆ.
"

ಗ್ರಾಪಂನ ಕಸದ ವಾಹನವು ಪ್ರತಿ ಮನೆಮನೆಗೆ ತೆರಳಿ ಕಸವನ್ನು ಸಂಗ್ರಹಿಸುತ್ತಿದೆ. ಸಂಗ್ರಹಿಸಿದ ಕಸವನ್ನು ಹುಲಿಗಿ ಹೊಸಳ್ಳಿ ಬಹುಗ್ರಾಮಗಳ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕಳಿಸಿ ಸರಿಯಾದ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ.

ಹುಲಿಗಿ ಕ್ಷೇತ್ರದಲ್ಲಿನ ಕಸವನ್ನು ತುಂಗಭದ್ರಾ ನದಿ ತೀರದಲ್ಲಿ ಹಾಕುತ್ತಿರುವುದು ಸರಿಯಲ್ಲ. ಈ ಬಗ್ಗೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ನದಿ ಪಾವಿತ್ರ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net