ಗಂಗಾವತಿಯಲ್ಲಿ ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ 3ನೇ ಜಿಲ್ಲಾ ಸಮ್ಮೇಳನದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಎನ್.ನಾಗರಾಜ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಬಸವರಾಜ ಮರಕುಂಬಿ, ಎಂ.ಬಿ.ನಾಡಗೌಡ, ಹುಲಿಗೆಮ್ಮ, ಲಕ್ಷ್ಮೀದೇವಿ ಸೋನಾರ್ ಇತರರಿದ್ದರು.
ಗಂಗಾವತಿ: ಕಾರ್ಮಿಕರ ಹಿತಾಸಕ್ತಿ ಕಾಪಾಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಲವಾಗಿದ್ದು ಉದ್ಯೋಗ ಭದ್ರತೆ ಇಲ್ಲದಂತಾಗಿದೆ ಎಂದು ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಎನ್.ನಾಗರಾಜ ಹೇಳಿದರು.
ನಗರದ ಶ್ರೀ ಚನ್ನಬಸವಸ್ವಾಮಿ ಕಲಾ ಮಂದಿರದಲ್ಲಿ ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಜಿಲ್ಲಾ ಘಟಕದಿಂದ ಗುರುವಾರ ಹಮ್ಮಿಕೊಂಡ 3ನೇ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದರು. ಯುದ್ಧದ ಪರಿಣಾಮ ದೇಶದ ಮೇಲೆ ಬೀರಿದ್ದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಸರ್ಕಾರದ ನೀತಿಗಳು ನಿರುದ್ಯೋಗ ಹೆಚ್ಚಿಸುತ್ತಿದ್ದು, ನರೇಗಾ ಯೋಜನೆಗೆ ಕತ್ತರಿ ಹಾಕಿದ್ದರಿಂದ ಬಡ ಕೂಲಿಕಾರರು ಕೆಲಸ ಇಲ್ಲದೆ ಕಂಗಾಲಾಗಿದ್ದಾರೆ ಎಂದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಮಾತನಾಡಿ, ಖಾತ್ರಿ ಯೋಜನೆ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವುದರ ಜತೆಗೆ ಕೂಲಿ ಮೊತ್ತ ಮತ್ತು ಮಾನವ ದಿನಗಳನ್ನು ಹೆಚ್ಚಿಸಬೇಕಿದೆ. ಉದ್ಯೋಗ ಭದ್ರತೆ ಕಾಯ್ದೆ ಜಾರಿಗೊಳಿಸುವ ಅಗತ್ಯವಿದೆ ಎಂದರು.
ಕೇಂದ್ರ ಸರ್ಕಾರದ ವಿಬಿ ಜಿ ರಾಮ್‌ಜಿ ಯೋಜನೆ ರದ್ದುಗೊಳಿಸುವುದು, ಬಿಪಿಎಲ್ ಕಾರ್ಡ್‌ದಾರರಿಗೆ 35ಕೆಜಿ ಅಕ್ಕಿ ಸೇರಿ 14ವಸ್ತುಗಳನ್ನು ರಿಯಾಯಿತಿ ದರದಲ್ಲಿ ವಿತರಿಸುವುದು, ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುವವರಿಗೆ ಸಾಗುವಳಿ ಚೀಟಿ ಮತ್ತು ಪಹಣಿ ವಿತರಣೆ, ನಿವೇಶನ ರಹಿತರಿಗೆ ನಿವೇಶನ ಜತೆಗೆ ವಸತಿ ವ್ಯವಸ್ಥೆ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳ ನಿರ್ಣಯ ಕೈಗೊಳ್ಳಲಾಯಿತು.