ಕೊಳಚೆ ಸಂಗ್ರಹಗಾರವಾದ ತುಂಗಭದ್ರಾ ಕಾಲುವೆ

ಬಸಾಪುರ ಗ್ರಾಮದ ಮಧ್ಯಭಾಗದ ತುಂಗಭದ್ರಾ ವಿತರಣಾ ಕಾಲುವೆಯಲ್ಲಿ ಚರಂಡಿ ನೀರು ಮತ್ತು ತ್ಯಾಜ್ಯ ಸಂಗ್ರಹವಾಗಿರುವುದು.
ಬಸಾಪುರ ಗ್ರಾಮದ ಮಧ್ಯಭಾಗದ ತುಂಗಭದ್ರಾ ವಿತರಣಾ ಕಾಲುವೆಯಲ್ಲಿ ಚರಂಡಿ ನೀರು ಮತ್ತು ತ್ಯಾಜ್ಯ ಸಂಗ್ರಹವಾಗಿರುವುದು.
Published on
ಮುನಿರಾಬಾದ್: ಸಮೀಪದ ಹೊಸ ಬಂಡಿಹರ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರದಲ್ಲಿ ಸಾರ್ವಜನಿಕರ ಆರೋಗ್ಯಕ್ಕೆ ಕುತ್ತು ಬಂದೊದಗಿದೆ. ಗ್ರಾಮದ ಮಧ್ಯಭಾಗದಲ್ಲಿ ಹರಿಯುವ ತುಂಗಭದ್ರಾ ವಿತರಣಾ ಕಾಲುವೆಯು ಸದ್ಯ ಚರಂಡಿ ನೀರು ಮತ್ತು ತ್ಯಾಜ್ಯ ಸಂಗ್ರಹಗಾರವಾಗಿ ಮಾರ್ಪಟ್ಟಿದ್ದು, ಇಡೀ ಪ್ರದೇಶವೇ ಕೊಳಚೆಯಾಗಿ ಮಾರ್ಪಟ್ಟಿದೆ.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಸದ್ಯ ನೀರು ಸ್ಥಗಿತಗೊಳಿಸಿರುವುದರಿಂದ, ವಿತರಣಾ ಕಾಲುವೆಯಲ್ಲಿ ಚರಂಡಿ ನೀರು ಮಾತ್ರ ಬಂದು ಸಂಗ್ರಹವಾಗುತ್ತಿದೆ. ಈ ನೀರು ಮುಂದೆ ಹರಿಯದೆ ನಿಂತಲ್ಲೇ ನಿಂತಿರುವುದರಿಂದ ಜಲ ಸಸ್ಯಗಳು ಹಾಗೂ ಗಿಡಗಂಟಿಗಳು ವ್ಯಾಪಕವಾಗಿ ಬೆಳೆದುಕೊಂಡಿವೆ. ಇದರಿಂದ ಇಡೀ ವಾತಾವರಣ ಕಲುಷಿತಗೊಂಡಿದ್ದು, ಎಲ್ಲೆಡೆ ದುರ್ವಾಸನೆ ಹರಡಿದೆ. ಕಾಲುವೆ ದಡದಲ್ಲೇ ವಾಸಿಸುವ ನಿವಾಸಿಗಳು, ಅದರಲ್ಲೂ ಮುಖ್ಯವಾಗಿ ಚಿಕ್ಕ ಮಕ್ಕಳು ಮತ್ತು ವೃದ್ಧರು ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುತ್ತಿದ್ದಾರೆ. ಕತ್ತಲಾಗುತ್ತಿದ್ದಂತೆ ಹಾವು, ಚೇಳುಗಳಂತಹ ವಿಷಜಂತುಗಳ ಕಾಟ ಹೆಚ್ಚಾಗುತ್ತಿದ್ದು, ಗ್ರಾಮಸ್ಥರು ಜೀವಭಯದಲ್ಲೇ ಕಾಲ ಕಳೆಯುವಂತಾಗಿದೆ.
ಈ ಬಗ್ಗೆ ಹಲವು ಬಾರಿ ಗ್ರಾಪಂಗೆ ಮೌಖಿಕ ಮತ್ತು ಲಿಖಿತ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳಾದ ಮೆಹಬೂಬ್ ಭೀಮನೂರು, ಹನುಮಂತಪ್ಪ ವಡ್ಡರ, ಸುಧಾಕರ ಶೆಟ್ಟಿ, ಲಾಲುಸಾಬ್ ಭೀಮನೂರು, ಜಂಬಣ್ಣ, ನಾಗರಾಜ ಉಪ್ಪಾರ, ಮಲ್ಲಮ್ಮ ವಡ್ಡರ, ಜಿಲಾನ್ ಸಾಬ್, ನಿಜಾಮುದ್ದೀನ್ ಮನವಿ ಮಾಡಿದ್ದಾರೆ.
ಸಂಬಂಧಪಟ್ಟ ಮೇಲಧಿಕಾರಿಗಳು ಹಾಗೂ ಗ್ರಾಪಂ ಆಡಳಿತ ತಕ್ಷಣ ಎಚ್ಚೆತ್ತುಕೊಂಡು ಕಾಲುವೆಯಲ್ಲಿನ ಕೊಳಚೆ ತೆರವುಗೊಳಿಸಬೇಕು. ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net