ಗಂಗಾವತಿ ತಾಲೂಕಿನ ಶ್ರೀರಾಮನಗರದ ಕಾಲಜ್ಞಾನಿ ಶ್ರೀವೀರಬ್ರಹ್ಮೇಂದ್ರಸ್ವಾಮಿಗಳ ದೇವಾಲಯದಲ್ಲಿ ಶ್ರೀ ಮದ್ವಿರಾಟ ಪೋತಲೂರು ವೀರಬ್ರಹ್ಮೇಂದ್ರಸ್ವಾಮಿಗಳ ಆರಾಧನೆ ಮಹೋತ್ಸವ ನಿಮಿತ್ತ ಗಣಪತಿ, ನವಗ್ರಹ ಹೋಮ ಪೂರ್ಣಾಹುತಿ ನೆರವೇರಿಸಲಾಯಿತು.ದೇವಾಲಯ ಸಮಿತಿ ಅಧ್ಯಕ್ಷ ರಾಮಬ್ರಹ್ಮಂ, ವೇ.ಮೂರ್ತಿ ಅಶೋಕ ಮತ್ತು ದೇವಾಲಯದ ಪ್ರಧಾನ ಅರ್ಚಕ ನರಸಿಂಹಾಚಾರ್,ಲಕ್ಷ್ಮೀ ದೇವಿ ಇತರರಿದ್ದರು.
ಗಂಗಾವತಿ: ತಾಲೂಕಿನ ಶ್ರೀರಾಮನಗರದ ಕಾಲಜ್ಞಾನಿ ಶ್ರೀವೀರಬ್ರಹ್ಮೇಂದ್ರಸ್ವಾಮಿಗಳ ದೇವಾಲಯದಲ್ಲಿ ಶ್ರೀ ಮದ್ವಿರಾಟ ಪೋತಲೂರು ವೀರಬ್ರಹ್ಮೇಂದ್ರಸ್ವಾಮಿ ಆರಾಧನೆ ಮಹೋತ್ಸವ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ದೇವಾಲಯದಲ್ಲಿ ಬೆಳಗ್ಗೆಯಿಂದಲೇ ನಿಂತರ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ಮೂಲ ವಿಗ್ರಹ ಹಾಗೂ ಪರಿವಾರ ದೇವರುಗಳಿಗೆ ಪಂಚಾಮತ ಅಭಿಷೇಕ, ಅಲಂಕಾರ, ವಿಶೇಷ ಪೂಜೆ, ಮಹಾ ಗಣಪತಿ, ನವಗ್ರಹ ಹೋಮ ಪೂರ್ಣಾಹುತಿ, ನಿರಂತರ ಭಜನೆ ಮತ್ತು ಸಾಮೂಹಿಕ ತೀರ್ಥ ಪ್ರಸಾದ ವಿತರಣೆ ಜರುಗಿತು.
ದೇವಾಲಯ ಸಮಿತಿ ಅಧ್ಯಕ್ಷ ರಾಮಬ್ರಹ್ಮಂ ಮಾತನಾಡಿ, ಕಲಿಯುಗದಲ್ಲಿ ಶ್ರೀಮಹಾವಿಷ್ಣುವಿನ ಅಂಶವಾಗಿ ಅವತರಿಸಿದ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳು ಭೂತ, ಭವಿಷ್ಯತ್ ಮತ್ತು ವರ್ತಮಾನ ಕಾಲದ ಜ್ಞಾನವನ್ನು ಭಕ್ತರಿಗೆ ಉಣಬಡಿಸಿ ಸನ್ಮಾರ್ಗದಲ್ಲಿ ನಡೆಸುತ್ತಿದ್ದಾರೆ. ಸ್ವಾಮಿಗಳ ದ್ವಾದಶ ಮಂತ್ರ ಪಾರಾಯಣ ಮಾಡುವುದರಿಂದ ಸಕಲ ಕಷ್ಟಗಳು ದೂರವಾಗಿ ಸುಖ, ಶಾಂತಿ ಮತ್ತು ಸಮೃದ್ಧಿ ಪ್ರಾಪ್ತವಾಗುತ್ತದೆ ಎಂದರು.
ವೇದಮೂರ್ತಿ ಅಶೋಕ ಮತ್ತು ದೇವಾಲಯದ ಪ್ರಧಾನ ಅರ್ಚಕ ನರಸಿಂಹಾಚಾರ್ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ದೇವಾಲಯ ಸಮಿತಿ ಸದಸ್ಯರು, ವಿಶ್ವಕರ್ಮ ಸಮಾಜ ಸೇರಿ ವಿವಿಧ ಗ್ರಾಮಗಳ ಭಕ್ತರಿದ್ದರು.