ಗಂಗಾವತಿ ಶ್ರೀ ಚನ್ನಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಶ್ರೀ ಗುರು ಚನ್ನಬಸವಸ್ವಾಮಿ ಉಚಿತ ಕೋಚಿಂಗ್ ಸೆಂಟರ್‌ನಿಂದ ಹಮ್ಮಿಕೊಂಡ ಉಚಿತ ತರಬೇತಿ ಶಿಬಿರವನ್ನು ಮಾಜಿ ಶಾಸಕ ಪರಣ್ಣಮುನವಳ್ಳಿ ಉದ್ಘಾಟಿಸಿದರು. ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ, ಟ್ರಸ್ಟ್ ಕಮೀಟಿ ಸದಸ್ಯರಾದ ಕೆ.ಚನ್ನಬಸಯ್ಯಸ್ವಾಮಿ, ಚಂದ್ರೇಗೌಡ ಪೊ.ಪಾಟೀಲ್, ಸಂಯೋಜಕ ಸಿದ್ದಲಿಂಗೇಶ ಪೂಲಭಾವಿ ಇತರರಿದ್ದರು.
ಮಾಜಿ ಶಾಸಕ ಪರಣ್ಣಮುನವಳ್ಳಿ ಹೇಳಿಕೆ ಗಂಗಾವತಿಯಲ್ಲಿ ಉದ್ಘಾಟನೆ
ಗಂಗಾವತಿ: ಉಚಿತ ಶಿಬಿರಗಳು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೂರಕವಾಗಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ತರಬೇತಿ ಶಿಬಿರಗಳು ಅಗತ್ಯವಾಗಿವೆ ಎಂದು ಮಾಜಿ ಶಾಸಕ ಪರಣ್ಣಮುನವಳ್ಳಿ ಹೇಳಿದರು.
ನಗರದ ಶ್ರೀ ಚನ್ನಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಶ್ರೀ ಚನ್ನಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿ ಮತ್ತು ಶ್ರೀಗುರು ಚನ್ನಬಸವಸ್ವಾಮಿ ಉಚಿತ ಕೋಚಿಂಗ್ ಸೆಂಟರ್‌ನಿಂದ ಬುಧವಾರ ಹಮ್ಮಿಕೊಂಡ 19ನೇ ವರ್ಷದ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ಮತ್ತು ಆಧ್ಯಾತ್ಮ ಚಿಂತನೆಯತ್ತ ಗಮನಹರಿಸಿರುವ ಶ್ರೀ ಚನ್ನಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿ ಬಡ ಪ್ರತಿಭಾವಂತ ಮಕ್ಕಳ ಅನುಕೂಲಕ್ಕಾಗಿ ಉಚಿತ ಶಿಬಿರ ಆಯೋಜಿಸುತ್ತಿರುವುದು ಪ್ರಶಂಸನೀಯ. ಯೋಗ, ಧ್ಯಾನ, ಮಾನವೀಯ ಮೌಲ್ಯಗಳ ಚಿಂತನೆ ಜತೆಗೆ ಸ್ಮಾರ್ಟ್ ಕ್ಲಾಸ್‌ಗಳ ಮೂಲಕ ವಿಷಯ ಬೋಧನೆ ಮಾಡಲಾಗುತ್ತಿದೆ ಎಂದರು.
ಶಿಬಿರದ ಸಂಚಾಲಕ ಸಿದ್ಧಲಿಂಗೇಶ ಪೂಲಭಾವಿ ಮಾತನಾಡಿ, 19 ವರ್ಷಗಳಿಂದ ಉಚಿತ ಶಿಬಿರ ಆಯೋಜಿಸಲಾಗುತ್ತಿದ್ದು, ಏ.15ರಿಂದ ಮೇ 25ರವರಿಗೆ ಮುಂದುವರಿಯಲಿದೆ. ಅನುಭವಿ ಸಂಪನ್ಮೂಲ ವ್ಯಕ್ತಿಗಳ ಜತೆಗೆ ತಂತ್ರಜ್ಞಾನಾಧಾರಿತ ತರಬೇತಿ ನೀಡಲಾಗುತ್ತಿದೆ ಎಂದರು.