ಕೌಡೆಪೀರ ದೇವರ ಮೆರವಣಿಗೆ ಅದ್ದೂರಿ

ಕನಕಗಿರಿ ರಾಜಬೀದಿಯಲ್ಲಿನ ಗಜಲಕ್ಷ್ಮೀ ದೇವಸ್ಥಾನದ ಬಳಿ ಕೌಡೆಪೀರ ದೇವರುಗಳು ವಿದಾಯಕ್ಕೂ ಮುನ್ನಾ ಸೇರಿಕೊಂಡು ಪರಸ್ಪರ ಆಲಂಗಿಸಿಕೊಂಡವು.
ಕನಕಗಿರಿ ರಾಜಬೀದಿಯಲ್ಲಿನ ಗಜಲಕ್ಷ್ಮೀ ದೇವಸ್ಥಾನದ ಬಳಿ ಕೌಡೆಪೀರ ದೇವರುಗಳು ವಿದಾಯಕ್ಕೂ ಮುನ್ನಾ ಸೇರಿಕೊಂಡು ಪರಸ್ಪರ ಆಲಂಗಿಸಿಕೊಂಡವು.
Published on

ಪ್ರಮುಖ ಮುಖ್ಯಾಂಶಗಳು

  • ವಿದಾಯಕ್ಕೂ ಮುನ್ನ ಪರಸ್ಪರ ಆಲಿಂಗನ
  • ಹಲಗೆ ಸದ್ದಿಗೆ ಯುವಕರ ಹೆಜ್ಜೆ
ಕನಕಗಿರಿ: ಪಟ್ಟಣದ ನಾನಾ ಮಸೀದಿಗಳಲ್ಲಿ ಕೂರಿಸಲಾಗಿದ್ದ ಕೌಡೆಪೀರಗಳನ್ನು ಭಾನುವಾರ ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ವಿದಾಯ ಹೇಳಲಾಯಿತು.
ಮೊಹರಂ ಅಲಾಯಿ ದೇವರುಗಳ ವಿಸರ್ಜನೆ ಬಳಿಕ ಚೋಟಾ ಮೊಹರಂ ಎಂದು ಕರೆಯಿಸಿಕೊಳ್ಳುವ ಕೌಡೇಪೀರಲ ದೇವರುಗಳನ್ನು ಪಟ್ಟಣದ ನಾನಾ ವಾರ್ಡ್‌ಗಳಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಕಳೆದೆರಡು ದಿನಗಳಿಂದ ಕೌಡೆಪೀರ ದೇವರುಗಳು ಭಕ್ತರ ಮನೆಗಳಿಗೆ ಹೋಗಿ ಹರಕೆ ತೀರಿಸಿದ್ದವು.
ಭಾನುವಾರ ಸಂಜೆ ಇಲ್ಲಿನ ರಾಜಬೀದಿಯಲ್ಲಿನ ಗಜಲಕ್ಷ್ಮೀ ದೇವಸ್ಥಾನದ ಮುಂಭಾಗದಲ್ಲಿ ಸೇರಿ ಪರಸ್ಪರ ಆಲಂಗಿಸಿಕೊಂಡು ಹಬ್ಬಕ್ಕೆ ವಿದಾಯ ಹೇಳಿ ವಿಸರ್ಜನೆಗಾಗಿ ಹಳ್ಳಕ್ಕೆ ತೆರಳಿದವು. ಕೌಡೆಪೀರ ದೇವರುಗಳನ್ನು ವೀಕ್ಷಿಸಲು ಪಟ್ಟಣದ ನೂರಾರು ಯುವಕರು, ಮಹಿಳೆಯರು ರಾಜಬೀದಿಯಲ್ಲಿ ಸೇರಿದ್ದರು. ಕೌಡೆಪೀರ ದೇವರುಗಳ ವಿದಾಯದ ಸಮ್ಮಿಲನವನ್ನು ವೀಕ್ಷಿಸಿ ಸಂಭ್ರಮಿಸಿದರು.
ಇನ್ನು ಧರ್ಮ, ಜಾತಿ ಬೇಧ ಮರೆತು ನೆರೆದಿದ್ದ ಯುವಕರು ಹಲಿಗೆ ಸದ್ದಿಗೆ ಹೆಜ್ಜೆ ಹಾಕಿ ಪ್ರಸಕ್ತ ವರ್ಷದ ಮೊಹರಂ ಹಬ್ಬಕ್ಕೆ ವಿದಾಯ ಹೇಳಿದರು. ಅಂಬೇಡ್ಕರ್ ವೃತ್ತದ ಬಳಿಯ ಸೇತುವೆ ಮೇಲೆ ಇಂದಿರಾ ಕ್ಯಾಂಪ್‌ನಲ್ಲಿನ ದುರ್ಗಾದೇವಿ ದೇವಸ್ಥಾನ ಹಾಗೂ ಭಕ್ತರ ಮನೆಗಳಿಗೆ ತೆರಳುವ ಕೌಡೆಪೀರ ಹೊತ್ತ ಯುವಕ ಮೊಣಕಾಲಿನಿಂದ ನಡೆಯುವುದನ್ನು ಕಣ್ತುಂಬಿಕೊಳ್ಳಲು ಭಾನುವಾರ ಬೆಳಗ್ಗೆ ನೂರಾರು ಸಂಖ್ಯೆಯಲ್ಲಿ ಜನತೆ ಸೇರಿದ್ದರು. ವಾಹನಗಳ ನಿಯಂತ್ರಣ ಹಾಗೂ ಬಂದೋಬಸ್ತ್‌ಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net