ಕನಕಗಿರಿ: ಜಂತರ್ ಮಂತರ್‌ನಲ್ಲಿ ಪ್ರತಿಭಟಿಸುತ್ತಿದ್ದ ಸೋನಂ ವಾಂಗ್ಟುಕ್‌ರನ್ನು ಬಲವಂತವಾಗಿ ಬಂಧಿಸಿರುವುದನ್ನು ಖಂಡಿಸಿ ಹಾಗೂ ನೀಟ್ ಯುಜಿಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯ ತನಿಖೆಗೆ ಆಗ್ರಹಿಸಿ ಎಸ್‌ಎಫ್‌ಐ ತಾಲೂಕು ಘಟಕದಿಂದ ಮಂಗಳವಾರ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಶರಣಪ್ಪಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ ಮಾತನಾಡಿ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮೇ 3ರಂದು ನಡೆಸಿದ ನೀಟ್ ಪರೀಕ್ಷೆಗೆ ದೇಶಾದ್ಯಂತ 22 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ರಾಜಸ್ಥಾನ ಸೇರಿ ವಿವಿಧೆಡೆ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ನಡೆಸಲಾಗಿದೆ. ಪರೀಕ್ಷಾ ಅಕ್ರಮ ಹಾಗೂ ಭವಿಷ್ಯದ ಅನಿಶ್ಚಿತತೆ ಪರಿಣಾಮವಾಗಿ ದೇಶಾದ್ಯಂತ 21 ಅಮಾಯಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆರಂಭದಿಂದಲೂ ಪರೀಕ್ಷೆಗಳ ದುರುಪಯೋಗ ಹಾಗೂ ಅಕ್ರಮಗಳಿಗೆ ಹೆಸರಾಗಿರುವ ಎನ್‌ಟಿಎ ಸಂಸ್ಥೆ, ಪಾರದರ್ಶಕ ನಿರ್ವಹಣೆಯಲ್ಲಿ ಅಸಮರ್ಥವಾಗಿದೆ. ಹಿಂದೆ 89 ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದು, 48 ಬಾರಿ ಮರು ಪರೀಕ್ಷೆ ನಡೆಸಲಾಗಿದೆ. ಅಸಮರ್ಥ ಎನ್‌ಟಿಎ ಸಂಸ್ಥೆಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ತಾಲೂಕಾಧ್ಯಕ್ಷ ಹನುಮೇಶ ಮ್ಯಾಗಡೆ ಮಾತನಾಡಿ, ಜಂತರ್ ಮಂತರ್‌ನಲ್ಲಿ ಸೋನಂ ವಾಂಗ್ಟುಕ್ ಕೇಂದ್ರ ಶಿಕ್ಷಣ ಸಚಿವ ಧರ್ಮೇದ್ರ ಪ್ರಧಾನ್ ರಾಜೀನಾಮೆ ಹಾಗೂ ಶೈಕ್ಷಣಿಕ ಸುಧಾರಣೆಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಆದರೆ, ಕೇಂದ್ರ ಸರ್ಕಾರ ಪೊಲೀಸ್ ಬಲಪ್ರಯೋಗದಿಂದ ಬಲವಂತವಾಗಿ ಸೋನಂ ಅವರನ್ನು ಬಂಧಿಸಿದೆ.
ಜು.20ರಂದು ಪಾರ್ಲಿಮೆಂಟ್ ಚಲೋ ಚಳವಳಿ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಶಾಂತಿಯುತ ಪ್ರತಿಭಟನೆ ಹತ್ತಿಕ್ಕಲು ಯತ್ನಿಸಿರುವುದು ಖಂಡನೀಯ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಕ್ಕೆ ಎನ್‌ಟಿಎ 1 ಕೋಟಿ ರೂ. ಪರಿಹಾರ ನೀಡಬೇಕು. ನೀಟ್ ಪರೀಕ್ಷೆ ಬ್ಯಾನ್ ಮಾಡಿ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು. ವಿದ್ಯಾರ್ಥಿಗಳಿಗಾದ ಅನ್ಯಾಯಕ್ಕೆ ಪ್ರಧಾನಿ ಮೋದಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಕೃಷಿ ಕೂಲಿ ಕಾರ್ಮಿಕರ ಸಂಘದ ತಾಲೂಕು ಕಾರ್ಯದರ್ಶಿ ಬಾಳಪ್ಪ ಹುಲಿಹೈದರ್, ತಾಲೂಕು ಅಧ್ಯಕ್ಷ ರಮೇಶ ಬಡಿಗೇರ, ಸದಸ್ಯ ಮಂಜುನಾಥ ಹಿರೇಡಂಕನಲ್, ವಿದ್ಯಾರ್ಥಿಗಳಾದ ದುರ್ಗಮ್ಮ, ಪ್ರಕಾಶ, ದೇವರಾಜ, ಪಲ್ಲವಿ ಇತರರಿದ್ದರು.