ಗಿಣಿಗೇರಾ-ಮುನಿರಾಬಾದ್ ರೈಲು ನಿಲ್ದಾಣಗಳ ನಡುವಿನ ಎಲ್.ಸಿ. ಸಂಖ್ಯೆ 77 (ಹಿಟ್ನಾಳ) ರ ಬದಲಾಗಿ ನಿರ್ಮಾಣಗೊಳ್ಳಲಿರುವ ರಸ್ತೆ ಮೇಲ್ಸೇತುವೆ ಕಾಮಗಾರಿಗೆ ಹಿಟ್ನಾಳದಲ್ಲಿ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಸೋಮವಾರ ಭೂಮಿಪೂಜೆ ನೆರವೇರಿಸಿದರು. ಎಂಎಲ್‌ಸಿ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ್ ದಢೇಸುಗೂರು ಇತರರಿದ್ದರು.
ಮುನಿರಾಬಾದ್: ಗ್ರಾಮೀಣ, ನಗರ ಪ್ರದೇಶಗಳ ಜನರಿಗೆ ವಿಶ್ವಾಸಾರ್ಹ, ಸುರಕ್ಷಿತ ಮತ್ತು ಸುವ್ಯವಸ್ಥಿತ ರೈಲ್ವೆ ಸಂಪರ್ಕ ಮತ್ತು ಸೇವೆ ಒದಗಿಸುವುದು ಕೇಂದ್ರ ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ರಾಜ್ಯ ರೈಲ್ವೆ ಹಾಗೂ ಜಲಶಕ್ತಿ ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.
ಗಿಣಿಗೇರಾ ಮುನಿರಾಬಾದ್ ರೈಲು ನಿಲ್ದಾಣ ನಡುವಿನ ಎಲ್.ಸಿ ಸಂಖ್ಯೆ 77 (ಹಿಟ್ನಾಳ) ಬದಲಾಗಿ ನಿರ್ಮಾಣಗೊಳ್ಳಲಿರುವ ರಸ್ತೆ ಮೇಲ್ಸೇತುವೆ ಕಾಮಗಾರಿಗೆ ಹಿಟ್ನಾಳದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಸೋಮವಾರ ಮಾತನಾಡಿದರು. ರೈಲು ಹಳಿ ದಾಟುವಾಗ ಜನರು ಮತ್ತು ವಾಹನ ಸವಾರರು ಎದುರಿಸುತ್ತಿದ್ದ ಅಪಾಯಗಳನ್ನು ಶಾಶ್ವತವಾಗಿ ನಿವಾರಿಸುವ ಉದ್ದೇಶದಿಂದ ಎಲ್.ಸಿ. ಸಂಖ್ಯೆ 77ರ ಬದಲಾಗಿ ರಸ್ತೆ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರ ಸಮಯ ಉಳಿತಾಯ ಜತೆಗೆ ಅಪಘಾತಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶಾದ್ಯಂತ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿದ್ದಾರೆ. ರೈಲ್ವೆ ಹಾಗೂ ರಸ್ತೆ ಸಂಪರ್ಕವನ್ನು ಸಮನ್ವಯಗೊಳಿಸಿ ಜನಸಾಮಾನ್ಯರ ಜೀವನ ಸುಗಮಗೊಳಿಸುವ ಕೆಲಸ ನಿರಂತರ ನಡೆಯುತ್ತಿದೆ ಎಂದರು.
ಹಿಟ್ನಾಳ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರಿಗೆ ಈ ರಸ್ತೆ ಮೇಲ್ಸೇತುವೆ ವರದಾನವಾಗಿದ್ದು, ಕೃಷಿ ಉತ್ಪನ್ನಗಳ ಸಾಗಣೆ, ಶಿಕ್ಷಣ, ಆರೋಗ್ಯ ಮತ್ತು ವ್ಯಾಪಾರ ವಹಿವಾಟುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಗುಣಮಟ್ಟದ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು. ಅಭಿವೃದ್ಧಿ ಕೆಲಸಗಳು ಜನರಿಗೆ ನಿಜವಾದ ಲಾಭ ತಲುಪುವಂತೆ ಜವಾಬ್ದಾರಿಯಿಂದ ನಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂಎಲ್‌ಸಿ ಹೇಮಲತಾ ನಾಯಕ, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ್ ದಢೇಸುಗೂರು, ಬಸವರಾಜ್ ಕ್ಯಾವಟರ್ ಸೇರಿದಂತೆ ಕಾರ್ಯಕರ್ತರಾದ ಪ್ರಭುಗೌಡ ಪಾಟೀಜ್, ಪ್ರದೀಪ್ ಹಿಟ್ನಾಳ ಇದ್ದರು.