ಬರಿದಾದ ತುಂಗಭದ್ರಾ ಒಡಲು

ಕೊಪ್ಪಳ ತಾಲೂಕಿನ ಮುನಿರಾಬಾದ್​ ಟಿಬಿ ಡ್ಯಾಂನಲ್ಲಿ ನೀರಿನ ಪ್ರಮಾಣ ತೀವ್ರ ಕುಸಿದಿರುವುದು.
ಕೊಪ್ಪಳ ತಾಲೂಕಿನ ಮುನಿರಾಬಾದ್​ ಟಿಬಿ ಡ್ಯಾಂನಲ್ಲಿ ನೀರಿನ ಪ್ರಮಾಣ ತೀವ್ರ ಕುಸಿದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕುಡಿವ ನೀರುಗೂ ಸಂಕಷ್ಟ
ಕೊಪ್ಪಳ : ಕೊಪ್ಪಳ-ಬಳ್ಳಾರಿ-ವಿಜಯನಗರ-ರಾಯಚೂರು ಸೇರಿ ವಿವಿಧ ಜಿಲ್ಲೆಗಳ ಕುಡಿವ ನೀರು ಹಾಗೂ 6 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿಗೆ ಆಸರೆಯಾಗಿರುವ ತುಂಗಭದ್ರಾ ಜಲಾಶಯದ ಒಡಲು ಬಹುತೇಕ ಬರಿದಾಗಿದ್ದು ಭವಿಷ್ಯದ ದಿನಗಳಲ್ಲಿ ಕುಡಿವ ನೀರಿನ ಅಭಾವ ತಂದೊಡ್ಡುವ ಲಕ್ಷಣ ದಟ್ಟವಾಗಿದೆ.
ಮುಂಗಾರು ಮಳೆ ಕೈ ಕೊಟ್ಟಿದ್ದು, ಜಲಾನಯನ ಪ್ರದೇಶವಾದ ಶಿವಮೊಗ್ಗ ಭಾಗದಲ್ಲೂ ಮಳೆ ಆಗದಿರುವುದು ಒಳಹರಿವು ಕುಸಿತಕ್ಕೆ ಕಾರಣವಾಗಿದೆ. 105 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 9.67 ಟಿಎಂಸಿ ನೀರಿದೆ. ಒಳ ಹರಿವು ಶೂನ್ಯ ತಲುಪಿದೆ. 2 ಟಿಎಂಸಿಯಷ್ಟು ಡೆಡ್​ ಸ್ಟೋರೆಜ್​ ಇರಲಿದೆ. ಬಿಸಿಲು ಮುಂದುವರೆದಿದ್ದು ಆವಿಯಾಗುವಿಕೆ ಪ್ರಮಾಣ ತಗ್ಗಿಲ್ಲ.
ಕಳೆದ ವರ್ಷ ಈ ದಿನಕ್ಕೆ 46.29 ಟಿಎಂಸಿ ನೀರಿತ್ತು. ಕಳೆದ ವರ್ಷ ಅವಧಿಗಿಂತ ಮೊದಲೇ ಡ್ಯಾಂ ಭರ್ತಿಯಾದರೂ 19ನೇ ಕ್ರಸ್ಟ್​ ಗೇಟ್​ಗೆ ಅಳವಡಿಸಿದ್ದ ಸ್ಟಾಪ್​ಲಾಗ್​ ಗೇಟ್​ ಭದ್ರತೆ ದೃಷ್ಟಿಯಿಂದ ಕೇವಲ 80 ಟಿಎಂಸಿ ನೀರು ಸಂಗ್ರಹಿಸಲಾಗಿದೆ. ನೂರಾರು ಟಿಎಂಸಿ ನೀರು ವ್ಯರ್ಥವಾಗಿ ನದಿಗೆ ಹರಿದು ಹೋಗಿದೆ. ಬೇಸಿಗೆ ಅವಧಿಯಲ್ಲೂ ಹೊಸ ಗೇಟ್​ ಅಳವಡಿಕೆಗಾಗಿ 40 ಟಿಎಂಸಿ ನೀರು ವ್ಯರ್ಥವಾಗಿ ಕಾಲುವೆ, ನದಿಗೆ ಹರಿಸಿ ಇದ್ದ ನೀರು ಖಾಲಿ ಮಾಡಿದ್ದು ಸದ್ಯ ಕುಡಿವ ನೀರಿಗೂ ಸಂಕಷ್ಟ ತಂದೊಡ್ಡಿದೆ.
ಶೇ.40ರಷ್ಟು ಬಿತ್ತನೆಯಾಗಿದ್ದು, ಬಿತ್ತಿದ ಬೆಳೆ ಬೆಳವಣಿಗೆ ಆಗುತ್ತಿಲ್ಲ. ತೇವಾಂಶ ಕೊರತೆ ಕಾಡುತ್ತಿದ್ದು, ಒಂದೆರಡು ದಿನದಲ್ಲಿ ಮಳೆ ಆಗದಿದ್ದಲ್ಲಿ ಬಿತ್ತನೆಯೂ ನಷ್ಟವಾಗಲಿದೆ. ಕೆಲವೆಡೆ ರೈತರು ಕಾರಂಜಿ ಬಳಸಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಹೆಸರು, ಸೂರ್ಯಕಾಂತಿ, ಹತ್ತಿ ಹಾಗೂ ಮೆಕ್ಕೆಜೋಳ ಬೆಳೆಗಳು ಒಣಗುವ ಭೀತಿಯಲ್ಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net