ಗಾಳಿಗೆ ನೆಲಕ್ಕುರುಳಿದ ಬ್ಯಾರಿಕೇಡ್​

ಕೊಪ್ಪಳ ಕೇಂದ್ರಿಯ ಬಸ್​ ನಿಲ್ದಾಣದ ಮುಂಬಾಗದಲ್ಲಿ ಸುಗಮ ಸಂಚಾರಕ್ಕಾಗಿ ಅಳವಡಿಸಿದ ಬ್ಯಾರಿಕೆಡ್​ ಗಾಳಿಯ ರಬಸಕ್ಕೆ ನೆಲಕ್ಕೂರುಳಿರುವುದು.
ಕೊಪ್ಪಳ ಕೇಂದ್ರಿಯ ಬಸ್​ ನಿಲ್ದಾಣದ ಮುಂಬಾಗದಲ್ಲಿ ಸುಗಮ ಸಂಚಾರಕ್ಕಾಗಿ ಅಳವಡಿಸಿದ ಬ್ಯಾರಿಕೆಡ್​ ಗಾಳಿಯ ರಬಸಕ್ಕೆ ನೆಲಕ್ಕೂರುಳಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬಸ್​ ನಿಲ್ದಾಣದ ಬಳಿ ಸಂಚಾರಕ್ಕೆ ತೊಡಕು
ಕೊಪ್ಪಳ : ನಗರದ ಹೃದಯಭಾಗದಲ್ಲಿರುವ ಕೇಂದ್ರ ಬಸ್​ ನಿಲ್ದಾಣದ ಮುಂಭಾಗದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಪೊಲೀಸ್​ ಇಲಾಖೆ ಅಳವಡಿಸಿದ್ದ ಬ್ಯಾರಿಕೇಡ್​ಗಳು ಗಾಳಿಗೆ ನೆಲಕ್ಕುರುಳಿದ ಘಟನೆ ಮಂಗಳವಾರ ನಡೆದಿದೆ. ವಾಹನ ಸಂಚಾರದ ನಡುವೆ ಬ್ಯಾರಿಕೇಡ್​ಗಳು ರಸ್ತೆಗೆ ಬಿದ್ದ ಪರಿಣಾಮ ವಾಹನ ಸವಾರರು ಆತಂಕಕ್ಕೆ ಒಳಗಾದರು.
ಬಸ್​ ನಿಲ್ದಾಣದ ಸುತ್ತಮುತ್ತ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸುವ ಉದ್ದೇಶದಿಂದ ಬ್ಯಾರಿಕೇಡ್​ ಅಳವಡಿಸಲಾಗಿತ್ತು. ಆರಂಭದಲ್ಲಿ ಸಂಚಾರ ನಿಯಂತ್ರಣಕ್ಕೆ ಇದು ನೆರವಾದರೂ, ಮೂಲ ಸಮಸ್ಯೆಗಳಾದ ಫುಟ್​ಪಾತ್​ ಒತ್ತುವರಿ, ಅಕ್ರಮ ಪಾರ್ಕಿಂಗ್​ ಹಾಗೂ ರಸ್ತೆ ಬದಿಯ ವ್ಯಾಪಾರವನ್ನು ತೆರವುಗೊಳಿಸದೇ ಬ್ಯಾರಿಕೇಡ್​ ಅಳವಡಿಸಿರುವುದರಿಂದ ಸಂಚಾರ ವ್ಯವಸ್ಥೆ ಮತಷ್ಟು ಸಂಕೀರ್ಣಗೊಂಡಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಬಸ್​ ನಿಲ್ದಾಣದ ಎರಡೂ ಬದಿಯ ಫುಟ್​ಪಾತ್​ಗಳು ಸಂಪೂರ್ಣ ಅತಿಕ್ರಮಣಕ್ಕೆ ಒಳಗಾಗಿವೆ. ರಸ್ತೆಯ ಅರ್ಧ ಭಾಗದಲ್ಲೇ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಪಾರ್ಕ್​ ಮಾಡಲಾಗುತ್ತಿದ್ದು, ಕೆಲ ವ್ಯಾಪಾರಿಗಳು ರಸ್ತೆಯಲ್ಲೇ ವ್ಯಾಪಾರ ನಡೆಸುತ್ತಿರುವುದರಿಂದ ವಾಹನಗಳ ಓಡಾಟಕ್ಕೆ ಲಭ್ಯವಿರುವ ಜಾಗ ಕುಗ್ಗುತ್ತಿದೆ. ಇದರಿಂದ ಬಸ್​ಗಳು ಸೇರಿದಂತೆ ಬೃಹತ್​ ವಾಹನಗಳು ಯೂ-ರ್ಟನ್​ ಪಡೆಯಲು ಹರಸಾಹಸ ಪಡಬೇಕಾದ ಸ್ಥಿತಿ ನಿಮಾರ್ಣವಾಗಿದೆ.
ಸುಗಮ ಸಂಚಾರಕ್ಕಾಗಿ ಬ್ಯಾರಿಕೇಡ್​ ಅಳವಡಿಸಿರುವುದು ಉತ್ತಮ ಉದ್ದೇಶ. ಆದರೆ ರಸ್ತೆ ಅಗಲವೇ ಕಡಿಮೆಯಿರುವ ಸಂದರ್ಭದಲ್ಲಿ ಫುಟ್​ಪಾತ್​ ಒತ್ತುವರಿ ಹಾಗೂ ಅಕ್ರಮ ಪಾರ್ಕಿಂಗ್​ ತೆರವುಗೊಳಿಸದೆ ಬ್ಯಾರಿಕೇಡ್​ ಹಾಕಿರುವುದರಿಂದ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗಿದೆ ಎಂದು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಾಳಿಯ ರಭಸಕ್ಕೆ ಬ್ಯಾರಿಕೇಡ್​ ನೆಲಕ್ಕುರುಳಿರುವುದು ಅವುಗಳ ಸ್ಥಿರತೆ ಹಾಗೂ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಾಹನ ಸಂಚಾರದ ಮಧ್ಯೆಯೇ ಬ್ಯಾರಿಕೇಡ್​ ಬಿದ್ದಿರುವುದು ಅಪಾಯಕ್ಕೆ ಕಾರಣವಾಗಬಹುದಾಗಿದ್ದು, ತಾತ್ಕಾಲಿಕ ಬ್ಯಾರಿಕೇಡ್​ಗಳ ಬದಲಾಗಿ ರಸ್ತೆ ಮಧ್ಯದಲ್ಲಿ ಶಾಶ್ವತ ಡಿವೈಡರ್​ ನಿರ್ಮಿಸಬೇಕು. ಜೊತೆಗೆ ಫುಟ್​ಪಾತ್​ ಒತ್ತುವರಿ ತೆರವುಗೊಳಿಸಿ ಅಕ್ರಮ ಪಾರ್ಕಿಂಗ್​ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net