ಯಲಬುರ್ಗಾ: ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ಕಲಿಸುವ ಅಗತ್ಯವಿದೆ ಎಂದು ಕುದರಿಮೋತಿ ಚಿಕ್ಕಮ್ಯಾಗೇರಿ ಮೈಸೂರು ಸಂಸ್ಥಾನ ಮಠದ ಶ್ರೀ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಹಠಯೋಗಿ ಶ್ರೀ ಹುಚ್ಚಿರೇಶ್ವರ ಜಾತ್ರೋತ್ಸವ ಹಾಗೂ ರಥೋತ್ಸವದ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಧರ್ಮ ಚಿಂತನಾ ಗೋಷ್ಠಿಯಲ್ಲಿ ಮಾತನಾಡಿದರು.
ಭಗವಂತನ ಕೃಪೆಗೆ ಪಾತ್ರರಾಗಬೇಕಾದರೆ ನಿರ್ಮಲ ಭಕ್ತಿ ಶ್ರೇಷ್ಠವಾಗಿರಬೇಕು. ಪಾಲಕರು ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ಕಲಿಸಬೇಕು ಎಂದರು.
ವರಪರವಿ ಗ್ರಾಮದ ರಥ ಶಿಲ್ಪಿ ಬಸವರಾಜ ಬಡಿಗೇರ ಸಿದ್ಧ ಪಡಿಸಿದ ನೂತನ ರಥಕ್ಕೆ ಬೆಳಗ್ಗೆ ಬಂಡಿ ಗ್ರಾಮದ ಶಾಸ್ತ್ರಿ ಶೇಖರಯ್ಯ ಹಿರೇಮಠ ಅವರು ಹೋಮ ಹವನ ಮತ್ತು ಅಭಿಷೇಕ ಮಾಡಿದರು. ಬಳಿಕ ಅನೇಕ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿದರು.
ಅಪಾರ ಭಕ್ತರ ಸಮ್ಮುಖದಲ್ಲಿ ನೂತನ ರಥೋತ್ಸವ ಅದ್ದೂರಿಯಾಗಿ ನೆರವೇರಿತು. ಹುಡೇಜಾಲಿಯ ಪತ್ರಿ ಬಸವೇಶ್ವರ ಹಿರೇಮಠದ ವೀರಯ್ಯ ತಾತ ಅವರು ಐದು ದಿನಗಳಿಂದ ಶ್ರೀ ಹುಚ್ಚಿರೇಶ್ವರ ಜೀವನ ಚರಿತ್ರೆ ಕುರಿತು ಪುರಾಣ ಕಾರ್ಯಕ್ರಮ ನಡೆಸಿದರು. ಗಾಯಕ ಮಂಗಳೇಶ ಶ್ಯಾಗೋಟಿ, ತಬಲಾ ವಾದಕ ನೀಲಕಂಠಪ್ಪ ರೊಡ್ಡರ ಸಂಗೀತ ಸೇವೆ ಸಲ್ಲಿಸಿದರು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ಭೂ ಕೈಲಾಸ ಮೇಲು ಗದ್ದುಗೆ ಮಠ ಶ್ರೀ ಗುರು ಶಾಂತವೀರ ಸ್ವಾಮೀಜಿ, ಮಕ್ಕಳ್ಳಿ ಶ್ರೀ ಶಿವಾನಂದ ಮಠದ ಶ್ರೀ ಶಿವಾನಂದ ಸ್ವಾಮೀಜಿ, ಈಶ್ವರಿ ವಿವಿಯ ಯೋಗಿನಿ ಅಕ್ಕ, ಗೀತಾ ಅಕ್ಕ ಇತರರಿದ್ದರು.