ಎಡದಂಡೆ ನಾಲೆಗಿಲ್ಲ "ಬಲ'

ನೀರಿನ ರಭಸಕ್ಕೆ ಕೊಚ್ಚಿಹೋದ ಎಡದಂಡೆ ಕಾಲುವೆ
ನೀರಿನ ರಭಸಕ್ಕೆ ಕೊಚ್ಚಿಹೋದ ಎಡದಂಡೆ ಕಾಲುವೆ
Published on

ಪ್ರಮುಖ ಮುಖ್ಯಾಂಶಗಳು

  • 70 ವರ್ಷವಾದರೂ ದುರಸ್ಥಿಗೆ ದೊರೆಯದ ಅನುದಾನ
  • ವರದಿ ತಯಾರಿಕೆಯಲ್ಲಿಯೇ ಕಾಲಹರಣ
ವಿಜಯವಾಣಿ ವಿಶೇಷ ಕೊಪ್ಪಳ
ಕೊಪ್ಪಳ-ರಾಯಚೂರು ಜಿಲ್ಲೆಗಳಿಗೆ ಜೀವ ಜಲ ಒದಗಿಸುವ ತುಂಗಭದ್ರಾ ಎಡದಂಡೆ ನಾಲೆ ಸತತನಿರ್ಲಕ್ಷ್ಯಕ್ಕೆ ಒಳಗಾಗಿದೆ. ಜಲಾಶಯ ಲೋಕಾರ್ಪಣೆ ಕಾಲದಲ್ಲಿ ನಿರ್ಮಾಣಗೊಂಡಿದ್ದರೂ ಕಾಲ ಕಾಲಕ್ಕೆ ಗಟ್ಟಿಗೊಳಿಸುವ ಕೆಲಸ ಸರ್ಕಾರ ಮಾಡುತ್ತಿಲ್ಲ. ಪರಿಣಾಮ ಆಗಾಗ ಬೋಂಗಾ ಬೀಳುವುದು, ಕೊಚ್ಚಿ ಹೋಗುವುದು ಸಾಮಾನ್ಯ ಎಂಬಂತಾಗಿದೆ.
ನಾಲೆಯು ನೀರಾವರಿ ನಿಗಮ ವ್ಯಾಪ್ತಿಯಲ್ಲಿದ್ದು 6,02,699 ಎಕರೆ ಪ್ರದೇಶಕ್ಕೆ ನೀರುಣಿಸುತ್ತಿದೆ. ಜತೆಗೆ ಕುಡಿವ ನೀರು ಒದಗಿಸುತ್ತಿದೆ. ಮುನಿರಾಬಾದ್​ನಿಂದ ಹಿಡಿದು ರಾಯಚೂರಿನ ಯರಗೇರಾವರೆಗೆ ಕಾಲುವೆ ಆಧರಿಸಿ ಬಹುಪಾಲು ಕೃಷಿ ಅವಲಂಬಿಸಿದೆ. ಪರೋಕ್ಷವಾಗಿ ಸಾವಿರಾರು ಎಕರೆ ಭೂಮಿ ಹಸಿರಾಗುತ್ತಿದೆ. ಡ್ಯಾಂನಿಂದ ರಾಯಚೂರುವರೆಗೆ 227 ಕಿ.ಮೀ. ಉದ್ದವಿದ್ದು ಕೇವಲ ಗುರುತ್ವಾಕರ್ಷಣೆ ಬಲದಿಂದಲೇ ಜಮೀನಿಗೆ ನೀರೊದಗಿಸುತ್ತಿದೆ. ಗುರುತ್ವಾಕರ್ಷಣೆ ಬಳಸಿಕೊಂಡ ಕಾರಣ ಬಹುಪಾಲು ಕಾಲುವೆಯನ್ನು ನೆಲಮಟ್ಟದಿಂದ ಮೇಲ್ಭಾಗದಲ್ಲಿ ನಿರ್ಮಿಸಲಾಗಿದೆ.
ತಗ್ಗು ಪ್ರದೇಶಗಳಲ್ಲಿ ಅಕ್ವಡಕ್ಟ್​ಗಳನ್ನು ನಿರ್ಮಿಸಿದರೆ, ಕೆಲವೆಡೆ ಅಂಡರ್​ ಟನಲ್​ಗಳಿವೆ. ಶಿವಪುರ, ಸಣಾಪುರ, ಗಣೇಕಲ್​ನಂತ ಕಿರು ಜಲಾಶಯಗಳಿವೆ. ಮೈಲ್​ 19ವರೆಗೆ ಎಡದಂಡೆ ವಿಜಯನಗರ ಕಾಲುವೆಗಳ ಉಪ ಕಾಲುವೆಗಳು ಹರಡಿಕೊಂಡಿವೆ. 2009-10ರಲ್ಲಿ ಬಿ.ಎಸ್​.ಯಡಿಯೂರಪ್ಪ ಸಿಎಂ ಆಗಿದ್ದಾಗ ಕಾಲುವೆ ಆಧುನೀಕರಣ ಕಾಮಗಾರಿ ನಡೆಸಲಾಗಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಮಾಡಿಲ್ಲ. ಬದಲಿಗೆ ಶಿಥಿಲಗೊಂಡ, ಅಪಾಯ ಮಟ್ಟದಲ್ಲಿದ ಭಾಗವನ್ನು ಮಾತ್ರ ಬಲಪಡಿಸಲಾಗಿದೆ. ಕಾಮಗಾರಿ ನಡೆದು 15 ವರ್ಷಗಳಾಗಿದ್ದು, ಅಲ್ಲಲ್ಲಿ ಕಾಲುವೆ ಬಲ ಕಳೆದುಕೊಂಡಿದೆ.
ಸದ್ಯ ಮೈಲ್​ 10ರ ಬಳಿ ಕಾಲುವೆ ಕೊಚ್ಚಿ ಹೋಗಿದೆ. ಕೆಲ ತಿಂಗಳ ಹಿಂದೆ ಇದೇ ಭಾಗದಲ್ಲಿ ಬೋಂಗಾ ಬಿದ್ದು ಕೆಲ ಭಾಗ ಶಿಥಿಲಗೊಂಡಿತ್ತು. ಮರು ನಿರ್ಮಿಸಿದರೂ ಗಟ್ಟಿಗೊಳಿಸದ ಕಾರಣ ಈಗ ದೊಡ್ಡ ಮಟ್ಟದ ಅಪಾಯ ಎದುರಾಗಿದೆ. ಕಳೆದ ನಾಲ್ಕೆದು ವರ್ಷದಲ್ಲಿ ಮೈಲ್​ 19ವರೆಗೂ ಅಲ್ಲಲ್ಲಿ 5-6 ಬಾರಿ ಬೋಂಗಾ ಬೀಳುವುದು, ಕಾಲುವೆ ಕೊಚ್ಚಿ ಹೋಗುವುದು ಪುನರಾವರ್ತನೆಯಾಗುತ್ತಿದೆ. ಮುನಿರಾಬದ್​ ಕೇಂದ್ರ ನೀರಾವರಿ ವಲಯ ಅಧಿಕಾರಿಗಳು ಈ ಬಗ್ಗೆ ಸರ್ಕಾರಕ್ಕೆ ಆಗಾಗ ವರದಿ ಸಲ್ಲಿಸಿದ್ದು ಉಂಟು.

ತಜ್ಞರ ತಂಡದಿಂದ ಪರಿಶೀಲನೆ

ಟಿಬಿ ಡ್ಯಾಂ ಗೇಟ್​ ಅಳವಡಿಕೆ ಹಿನ್ನೆಲೆಯಲ್ಲಿ ಎರಡನೇ ಬೆಳೆಗೆ ಕಳೆದ ಡಿಸೆಂಬರ್​ನಿಂದ ನೀರು ನಿಲ್ಲಿಸಲಾಗಿದೆ. ಕಾಲುವೆ ಖಾಲಿ ಇದ್ದು ನಿರ್ವಹಣೆಗೆ ಸಾಕಷ್ಟು ಸಮಯವಕಾಶವಿದೆ. ಇದೇ ಸಮಯದಲ್ಲಿ ನಿವೃತ್ತ ಅಧಿಕಾರಿಗಳ ತಂಡ ಕೆಲ ತಿಂಗಳ ಹಿಂದೆ ಕಾಲುವೆಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಆಗಲೂ ಕೇವಲ ಕ್ರಿಟಿಕಲ್​ ಸ್ಟ್ರಕ್ಚರ್​ ಮಾತ್ರ ಪರಿಗಣಿಸದೆ. 2009&10ರಲ್ಲಿ ಮಾಡದೇ ಬಿಟ್ಟಿದ್ದ ಭಾಗಕ್ಕೆ ಆದ್ಯತೆ ನೀಡಿದೆ. ಪಾಪಯ್ಯ ಟನಲ್​ನ್ನು ತಳ ಭಾಗದಲ್ಲಿ ಕೆಲ ಮೀಟರ್​ನಷ್ಟು ತಗ್ಗಿಸುವ ಮೂಲಕ ನೀರಿನ ರಭಸ ಹೆಚ್ಚಳಕ್ಕೆ ಆದ್ಯತೆ ನೀಡುವಂತೆ ಪ್ರಸ್ತಾವನೆ ನೀಡಿದೆ. ಉಳಿದಂತೆ ಶಿಥಿತ ಅಕ್ವಡಕ್ಟ್​, ಯುಟಿಗಳನ್ನು ಬಲಪಡಿಸಲು ಆದ್ಯತೆ ನೀಡುವಂತೆ ಶಿಾರಸ್ಸು ಮಾಡಿದೆ. ತಜ್ಞರ ಸಲಹೆ ಆಧರಿಸಿ 413 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆ ರಚಿಸಿ ನಿಗಮಕ್ಕೆ ಸಲ್ಲಿಸಲಾಗಿದೆ. ಅದಕ್ಕಿನ್ನು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net