ಅಳವಂಡಿ: ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಆಸ್ತಿಗಳ ದಾಖಲೆಗಳು ಮೃತಪಟ್ಟವರ ಹೆಸರಿನಲ್ಲಿವೆ. ಹಿರಿಯರು ಮೃತಪಟ್ಟು ವರ್ಷಗಳೇ ಕಳೆದಿದ್ದರೂ ಆಸ್ತಿ ದಾಖಲೆಗಳನ್ನು ಅವರ ಮಕ್ಕಳು, ಮೊಮ್ಮಕ್ಕಳ ಹೆಸರಿಗೆ ಬದಲಿಸಿಕೊಂಡಿಲ್ಲ. ಕಾರಣ ಸರ್ಕಾರ ಇ-ಪೌತಿ ಖಾತೆ ಆಂದೋಲನ ಪ್ರಾರಂಭಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಉಪ ತಹಸೀಲ್ದಾರ್ ಶ್ರೀನಾಥ ಜೋಶಿ ತಿಳಿಸಿದರು.
ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಕಂದಾಯ ಇಲಾಖೆಯಿಂದ ಆಯೋಜಿಸಿದ್ದ ಇ-ಪೌತಿ ಖಾತೆ ಆಂದೋಲನ ಉದ್ದೇಶಿಸಿ ಮಂಗಳವಾರ ಮಾತನಾಡಿದರು. ಪೌತಿ ಖಾತೆ ಮಾಡಿಸಿಕೊಳ್ಳುವುದರಿಂದ ಆಸ್ತಿ ಭಾಗ, ಪಾಲುದಾರಿಕೆ, ಮಾರಾಟ, ಬ್ಯಾಂಕ್‌ನಲ್ಲಿ ಅಡ ಇಟ್ಟು ಸಾಲ ಪಡೆಯುವುದು ಮುಂತಾದವುಗಳಿಗೆ ಅನುಕೂಲವಾಗಲಿದೆ.
ಸಾರ್ವಜನಿಕರು ಪೌತಿ ಖಾತೆ ನಮೂನೆ-19 ಅರ್ಜಿ, ಮರಣ ಹೊಂದಿದವರ ಮರಣ ಪ್ರಮಾಣ ಪತ್ರ, ವಂಶವೃಕ್ಷ ಪ್ರಮಾಣ ಪತ್ರ, ವಾರಸುದಾರರ ಆಧಾರ್ ಕಾರ್ಡ್ ಪ್ರತಿ ಮತ್ತು ಸರ್ವೇ ನಂಬರ್‌ಗಳ ಗಣಕೀಕೃತ ಪಹಣಿ ಪ್ರತಿಗಳನ್ನು ನೀಡಿದರೆ ಇ-ಪೌತಿ ಖಾತೆಯನ್ನು ಅಧಿಕಾರಿಗಳು ನೀಡಲಿದ್ದಾರೆ ಎಂದರು.
ಗ್ರಾಮ ಆಡಳಿತಾಧಿಕಾರಿ ಅರುಂಧತಿ ಮಾತನಾಡಿ, ಗ್ರಾಮದಲ್ಲಿ 636 ಇ-ಪೌತಿ ಖಾತೆಯಡಿ ಮರಣ ಎಂದು ಗುರುತಿಸಲಾದ ಖಾತೆದಾರಿದ್ದಾರೆ. ಈ ಖಾತೆ ಈಗಾಗಲೇ ವರ್ಗಾವಣೆ ಮಾಡಲಾಗಿದ್ದು ಇನ್ನೂ 301 ಅರ್ಜಿಗಳು ಇ-ಪೌತಿ ಖಾತೆಯಲ್ಲಿ ಬಾಕಿ ಇವೆ. ಕಾರಣ ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.