ಹುಲಿಗಿ ಗ್ರಾಮದಲ್ಲಿ ಏರ್ಪಡಿಸಿದ್ದ ಮಲ್ಲಿಗೆ ಬೆಳೆ ಕ್ಷೇತ್ರೋತ್ಸವದಲ್ಲಿ ಕೃಷಿ ವಿಜ್ಞಾನಿ ಡಾ. ಪಿ.ಆರ್.ಬದರಿ ಪ್ರಸಾದ್, ತೋಟಗಾರಿಕೆ ತಜ್ಞ ವಾಮನಮೂರ್ತಿ, ಪ್ರಗತಿಪರ ರೈತ ವೀರೇಶ್ ಬೆನಕಟ್ಟಿ ಇತರರಿದ್ದರು.
ಕೊಪ್ಪಳ: ರೈತರು ಕೇವಲ ಹೂವುಗಳ ನೇರ ಮಾರಾಟ ನೆಚ್ಚಿಕೊಳ್ಳದೆ ಮೌಲ್ಯವರ್ಧನೆ ಹಾಗೂ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ವರ್ಷವಿಡೀ ಲಾಭ ಪಡೆಯಬಹುದು ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಂದಾಳು ಡಾ.ಪಿ.ಆರ್.ಬದರಿ ಪ್ರಸಾದ್ ಹೇಳಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿವಿ ಹಾಗೂ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ತಾಲೂಕಿನ ಹುಲಿಗಿ ಗ್ರಾಮದ ಪ್ರಗತಿಪರ ರೈತ ವೀರೇಶ್ ಬಸವರಾಜ ಬೆನಕಟ್ಟಿ ಅವರ ತೋಟದಲ್ಲಿ ಆಯೋಜಿಸಿದ್ದ ಮಲ್ಲಿಗೆ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊಪ್ಪಳ ಭಾಗದಲ್ಲಿ 500ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಲ್ಲಿಗೆ ಕೃಷಿ ನಡೆಯುತ್ತಿದ್ದು, ಮಾರುಕಟ್ಟೆಯಲ್ಲಿ ಹೂವಿನ ಧಾರಣೆ ಆಗಾಗ ಏರಿಳಿತ ಕಾಣುತ್ತದೆ. ಇದನ್ನು ಎದುರಿಸಲು ರೈತರು ಸುಗಂಧದ್ರವ್ಯ ತಯಾರಿಕೆ ಹಾಗೂ ಮಾಲೆ ಕಟ್ಟುವ ಯಂತ್ರಗಳ ಬಳಕೆ ಕಲಿಯಬೇಕು. ಆಸಕ್ತ ರೈತರಿಗೆ ರಾಯಚೂರು ಕೃಷಿ ವಿವಿ ಹಾಗೂ ಬೆಂಗಳೂರಿನ ಐಐಎಚ್‌ಆರ್ ವಿಜ್ಞಾನಿಗಳಿಂದ ಉಚಿತ ತರಬೇತಿ ಕೊಡಿಸಲಾಗುವುದು ಎಂದು ತಿಳಿಸಿದರು.
ತೋಟಗಾರಿಕೆ ತಜ್ಞ ವಾಮನಮೂರ್ತಿ ಮಾತನಾಡಿ, ಕೇವಲ ಭತ್ತದ ಬೆಳೆ ನೆಚ್ಚಿಕೊಳ್ಳದೆ ಪುಷ್ಪ ಕೃಷಿ ಹಾಗೂ ಜೇನು ಸಾಕಣೆ ಮಾಡಿ ಉತ್ತಮ ಲಾಭ ಕಂಡುಕೊಳ್ಳಬಹುದು ಎಂದರು.