ಸರ್ವೇಯರ್‌ಗಳಿಗೆ ಮಾಡಬೇಕಿದೆ ಹದ್ದುಬಸ್ತು!

ಯಲಬುರ್ಗಾ ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ನೋಟ.
ಯಲಬುರ್ಗಾ ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಭೂಮಾಪಕರ ಮುಷ್ಕರದಿಂದ ಸರ್ವೇ ಕಾರ್ಯ ಬಂದ್
  • ತಪ್ಪದ ರೈತರ, ಜನರ ಅಲೆದಾಟ
ಯಲಬುರ್ಗಾ: ಕಳೆದೆರಡು ತಿಂಗಳಿಂದ ನಡೆಯುತ್ತಿರುವ ಪರವಾನಗಿ ಪಡೆದ ಭೂಮಾಪಕರ ಮುಷ್ಕರದಿಂದ ಯಲಬುರ್ಗಾ ಹಾಗೂ ಕುಕನೂರು ತಾಲೂಕುಗಳಲ್ಲಿ ಭೂಮಾಪನ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ರೈತರು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ವಿವಿಧೆಡೆ ಸರ್ವೇ ಕಾರ್ಯ ನಡೆಯದೇ 2,469ಕ್ಕೂ ಅಧಿಕ ಅರ್ಜಿಗಳು ಬಾಕಿ ಉಳಿದಿರುವ ವಿಷಯ ಜನರ ಆತಂಕಕ್ಕೆ ಕಾರಣವಾಗಿದೆ. ಬೇಸಿಗೆಯಲ್ಲಿ ಹೊಲಗಳಲ್ಲಿನ ಬೆಳೆ ಪ್ರಮಾಣ ಕಡಿಮೆ ಇರುವುದರಿಂದ ಭೂಮಾಪನ ಕಾರ್ಯ ನಡೆಸಲು ಸೂಕ್ತ ಅವಧಿಯಾಗಿದೆ. ಆದರೆ ಇದೇ ಸಂದರ್ಭದಲ್ಲಿ ಭೂಮಾಪಕರು ಹೋರಾಟಕ್ಕೆ ಇಳಿದಿರುವುದರಿಂದ ಜಮೀನು ಹದ್ದುಬಸ್ತು, ಪೋಡಿ, ಆಕಾರ್‌ಬಂದ್, 11ಇ ನಕ್ಷೆ ಹಾಗೂ ಕೋರ್ಟ್ ಸಂಬಂಧಿತ ಪ್ರಕರಣಗಳ ವಿಲೇವಾರಿ ಸ್ಥಗಿತಗೊಂಡಿವೆ. ಮಳೆಗಾಲದಲ್ಲಿ ಇನ್ನಷ್ಟು ಕಷ್ಟವಾಗಲಿದ್ದು, ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ.
ಯಲಬುರ್ಗಾ ಮತ್ತು ಕುಕನೂರು ತಾಲೂಕು ಭೂಮಾಪನ ಕಚೇರಿಗಳಲ್ಲಿ ಒಟ್ಟು 34 ಸಿಬ್ಬಂದಿ ಕಾರ್ಯನಿರ್ವಹಿಸಬೇಕಾಗಿದ್ದರೂ, ಸದ್ಯ ಕೇವಲ 6 ಭೂಮಾಪಕರು ಸೇವೆಯಲ್ಲಿದ್ದರೆ, ಉಳಿದ 28 ಭೂಮಾಪಕರು ವಿವಿಧ ಬೇಡಿಕೆ ಈಡೇರಿಸುವಂತೆ ನಡೆಸುತ್ತಿರುವ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಪೋಡಿಮುಕ್ತ ಗ್ರಾಮ ಅಭಿಯಾನ, ತಾತ್ಕಾಲಿಕ ಪೋಡಿ, ಹದ್ದುಬಸ್ತು ಹಾಗೂ ವಿವಿಧ ಸರ್ವೇ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿವೆ.
ಸರ್ವೇ ವಿಳಂಬವಾಗುತ್ತಿರುವುದರಿಂದ ಜಮೀನು ಖರೀದಿ, ಮಾರಾಟ, ಪಹಣಿ ತಿದ್ದುಪಡಿ, ಸಾಲ ಸೌಲಭ್ಯ, ಗಡಿ ವಿವಾದಗಳ ಪರಿಹಾರಕ್ಕೂ ಅಡಚಣೆ ಉಂಟಾಗಿದೆ. ರೈತರು ಕಚೇರಿಗಳಿಗೆ ಅಲೆದಾಡುತ್ತಾ ಬೇಸತ್ತು ಹೋಗಿದ್ದಾರೆ ಎಂದು ಕುಕನೂರು ತಾಲೂಕಿನ ರೈತರಾದ ಅಂದಪ್ಪ ಕೋಳೂರು, ಹನಮಗೌಡ ಮಾಲಿಪಾಟೀಲ್, ಮಾರುತಿ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ಶೀಘ್ರ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
"

ಪರವಾನಗಿ ಪಡೆದ ಭೂಮಾಪಕರು ಮುಷ್ಕರ ನಡೆಸುತ್ತಿರುವ ಕಾರಣ ಸರ್ವೇ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ನಮ್ಮಲ್ಲಿ ಸಿಬ್ಬಂದಿ ಕೊರತೆಯಿದ್ದು, ಯಲಬುರ್ಗಾ ಹಾಗೂ ಕುಕನೂರು ತಾಲೂಕುಗಳಲ್ಲಿ 6 ಸರ್ಕಾರಿ ಭೂಮಾಪಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ರೈತರ ಜಮೀನು ಸರ್ವೇ ಕಾರ್ಯಕ್ಕೆ ತೊಂದರೆಯಾಗುತ್ತಿದೆ.

— ಪುಂಡಲೀಕಪ್ಪ ಕುಂಬಾರ, ಭೂಮಾಪನ ಅಧಿಕಾರಿ, ಯಲಬುರ್ಗಾ

"

ಭೂಮಿಯಲ್ಲಿ ಬೆಳೆ ಇಲ್ಲದ ಸಮಯದಲ್ಲಿ ಸರ್ವೇ ಕಾರ್ಯ ನಡೆಯಬೇಕು. ಸರ್ಕಾರ ತಕ್ಷಣ ಸರ್ವೇಯರ್‌ಗಳ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸಲಾಗುವುದು.

— ಮಹಾಂತೇಶ್ ಕುರಿ, ಕರಮುಡಿ ರೈತ


"

ಸೇವಾಭದ್ರತೆ ಇಲ್ಲದೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಸಮಾನ ವೇತನ, ರಜೆ ಸೌಲಭ್ಯ, ಅಪಘಾತ ವಿಮೆ ಹಾಗೂ ಆರೋಗ್ಯ ಯೋಜನೆಗಳನ್ನು ಜಾರಿಗೆ ತರಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ರೈತರಿಗೆ ತೊಂದರೆ ಆಗುತ್ತಿರುವುದು ಗೊತ್ತಿದ್ದರೂ ನಮ್ಮ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯವಾಗಿದೆ.

— ಬಸವರಾಜ ಬಿಜಕಲ್ ತಾಲೂಕು ಅಧ್ಯಕ್ಷ, ಪರವಾನಗಿ ಭೂಮಾಪಕರ ಸಂಘ, ಯಲಬುರ್ಗಾ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net