ಯಲಬುರ್ಗಾದ ಸ್ನಾತಕೋತ್ತರ ಪದವಿ ಕೇಂದ್ರದಲ್ಲಿ ಭೂಗೋಳ ಶಾಸ್ತ್ರದ ಮಹತ್ವದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕೊಪ್ಪಳ ವಿವಿ ಕುಲಪತಿ ಎಸ್.ವಿ.ಡಾಣಿ ಉದ್ಘಾಟಿಸಿದರು. ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಕೆ.ಎಚ್.ಛತ್ರದ, ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಶರಣಪ್ಪ ಡಿ.ಗೌಡ್ರ, ಉಪನ್ಯಾಸಕರಾದ ಶ್ರೀಕಾಂತ, ಡಾ.ರವೀಂದ್ರ ಬೇಟಗೇರಿ ಇತರರಿದ್ದರು.
ಯಲಬುರ್ಗಾ: ಭೂಗೋಳ ಶಾಸ್ತ್ರ ಭೂಮಿಯ ಮೇಲೆ, ಅದರ ಭೌತಿಕ ಲಕ್ಷಣಗಳು ವಾತಾವರಣ, ವಾಸಿಸುವ ಜನರು ಹಾಗೂ ಪರಿಸರದ ನಡುವಿನ ಪರಸ್ಪರ ಸಂಬಂಧವನ್ನು ಅಧ್ಯಯನ ಮಾಡುವ ವಿಜ್ಞಾನವಾಗಿದೆ ಎಂದು ಕೊಪ್ಪಳ ವಿವಿ ಕುಲಪತಿ ಎಸ್.ವಿ.ಡಾಣಿ ಹೇಳಿದರು.
ಪಟ್ಟಣದ ಸ್ನಾತಕೋತ್ತರ ಪದವಿ ಕೇಂದ್ರದಲ್ಲಿ ಗುರುವಾರ 21ನೇ ಶತಮಾನದಲ್ಲಿ ಭೂಗೋಳ ಶಾಸ್ತ್ರದ ಮಹತ್ವದ ಕುರಿತು ವಿಶೇಷ ಉಪನ್ಯಾಸ ಮತ್ತು ಭೂಗೋಳ ಶಾಸ್ತ್ರ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿರು. ಅನೇಕ ವಿದ್ಯಾರ್ಥಿಗಳು ಭೌಗೋಳಿಕ ಶಾಸ್ತ್ರ ಅಧ್ಯಯನಕ್ಕೆ ಆಸ್ತಕಿ ತೋರುತ್ತಿಲ್ಲ. ಭೂಗೋಳ ಅಧ್ಯಯನ ಉದ್ಯೋಗ ಅವಕಾಶಕ್ಕೆ ಸಹಕಾರಿಯಾಗುತ್ತದೆ ಎಂದರು.
ಧಾರವಾಡದ ಭೌಗೋಳಿಕ ವಿಭಾಗ ಡೀನ್, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಅಧ್ಯಕ್ಷ ಡಾ.ಅರವಿಂದ ಮೂಲಿಮನಿ ಮಾತನಾಡಿ, ನೀರು, ಮಣ್ಣು, ಸಸ್ಯ, ಪ್ರಾಣಿವರ್ಗ ಹಾಗೂ ಜನರ ನಡುವೆ ಸಂಪರ್ಕ ಕೊಂಡಿಯಂತಿರುವ ಭೂಗೋಳವನ್ನು ರಾಜ್ಯದಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಬೋಧಿಸಲಾಗುತ್ತಿದೆ ಎಂದು ತಿಳಿಸಿದರು.
ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಕೆ.ಎಚ್.ಛತ್ರದ, ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಶರಣಪ್ಪ ಡಿ.ಗೌಡ್ರ, ಉಪನ್ಯಾಸಕರಾದ ಶ್ರೀಕಾಂತ, ಡಾ.ರವೀಂದ್ರ ಬೇಟಗೇರಿ, ಡಾ.ತಿಮ್ಮರೆಡ್ಡಿ, ಪಡಿಯಪ್ಪ, ರೇಖಾ ಇದ್ದರು.