ಬೀದಿ ನಾಯಿಗಳಿಂದ ಜನರಿಗೆ ಭೀತಿ

ಕನಕಗಿರಿಯ ಗಂಗಾಕ್ಯಾಂಪ್‌ನ ಮನೆಯಂಗಳದಲ್ಲಿ ಬೀದಿನಾಯಿಗಳು ನಿಂತಿರುವುದು.
ಕನಕಗಿರಿಯ ಗಂಗಾಕ್ಯಾಂಪ್‌ನ ಮನೆಯಂಗಳದಲ್ಲಿ ಬೀದಿನಾಯಿಗಳು ನಿಂತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸೆರೆಹಿಡಿದು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಜನಾಗ್ರಹ
  • ಕ್ರಮಕ್ಕೆ ಮುಂದಗಬೇಕಿದೆ ಪಪಂ
ಕನಕಗಿರಿ: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಪಟ್ಟಣದಲ್ಲಿ ನಾಯಿ ದಾಳಿಯಿಂದ ಹಲವರು ಗಾಯಗೊಂಡಿದ್ದರೂ ಇದುವರೆಗೆ ಬೀದಿ ನಾಯಿಗಳನ್ನು ಸೆರೆ ಹಿಡಿಯುವ ಕೆಲಸವಾಗದಿದ್ದರಿಂದ ಶನಿವಾರ ಗಂಗಾಕ್ಯಾಂಪ್‌ನ ಮನೆಗಳಿಗೆ ನುಗ್ಗಿದ್ದು, ನಿವಾಸಿಗಳಿಗೆ ಆತಂಕ ಮೂಡಿದೆ.
ಪಟ್ಟಣದಲ್ಲಿ 250ಕ್ಕೂ ಹೆಚ್ಚು ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ವಾಲ್ಮೀಕಿ ವೃತ್ತದಿಂದ ತಾವರಗೇರಾ ರಸ್ತೆ, ಬಸ್ ನಿಲ್ದಾಣ ರಸ್ತೆ, ನವಲಿ ರಸ್ತೆ, ಇಂದಿರಾ ನಗರಗಳಲ್ಲಿ ಕಾಟ ಹೆಚ್ಚಾಗಿದೆ. ಹೋಟೆಲ್, ಖಾನಾವಳಿ, ಮಾಂಸದಂಗಡಿಗಳಲ್ಲಿ ದೊರೆಯುವ ಆಹಾರ ತಿಂದು ಬದುಕುತ್ತಿರುವ ನಾಯಿಗಳು ಎಲ್ಲೆಂದರಲ್ಲಿ ನೆಲೆಯೂರಿವೆ. ಈ ನಾಯಿಗಳಿಂದ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗಳು ಸಾಕಷ್ಟಿವೆ.
ಬೀದಿ ನಾಯಿಗಳನ್ನು ಸೆರೆ ಹಿಡಿದು ಅವುಗಳಿಗೆ ಆಹಾರ, ಆರೈಕೆ, ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗಾಗಿ ಕಲಕೇರಿ ಮಾರ್ಗದಲ್ಲಿರುವ ಆಶ್ರಯ ಯೋಜನೆಯ ಬಡಾವಣೆಯಲ್ಲಿ ಶೆಡ್ ನಿರ್ಮಿಸಲಾಯಿತು. ಆದರೆ, ಈವರೆಗೂ ಒಂದು ಬೀದಿ ನಾಯಿಯನ್ನು ತಂದು ಅಲ್ಲಿ ಆರೈಕೆ ಮಾಡಿಲ್ಲ. ಇದರಿಂದ ಮಕ್ಕಳು, ವೃದ್ಧರು ಸೇರಿ ಜನರು ಓಡಾಡುವುದು ಕಷ್ಟವಾಗಿದ್ದು, ಪಟ್ಟಣದ 3ನೇ ವಾರ್ಡಿನ ಗಂಗಾ ಕ್ಯಾಂಪ್‌ನಲ್ಲಿ ನಾಯಿಗಳ ಹಿಂಡು ಮನೆಗೆ ನುಗ್ಗಿರುವುದು ಅಲ್ಲಿನ ನಿವಾಸಿಗಳನ್ನು ಆತಂಕಕ್ಕೀಡು ಮಾಡಿದೆ.
"

ಓಣಿಯಲ್ಲಿ 30ಕ್ಕೂ ಹೆಚ್ಚು ಬೀದಿನಾಯಿಗಳಿದ್ದು, ಗುಂಪಾಗಿ ಕಚ್ಚಾಡುತ್ತಾ ಮನೆಗೆ ನುಗ್ಗುತ್ತಿವೆ. ಮಕ್ಕಳಿಗೆ ಕಚ್ಚಲು ಮುಂದಾಗುತ್ತಿವೆ. ಇಲ್ಲೇ ಶಾಲೆ ಇರುವುದರಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಭಯವಾಗುತ್ತಿದೆ. ಬೀದಿ ನಾಯಿಗಳನ್ನು ಸೆರೆ ಹಿಡಿಯಲು ಪಟ್ಟಣ ಪಂಚಾಯಿತಿಯವರು ಕ್ರಮ ಕೈಗೊಳ್ಳಲಿ.

— ಮಹ್ಮದರಫಿ ಅಯೋಧ್ಯಾ ಗಂಗಾಕ್ಯಾಂಪ್ ನಿವಾಸಿ
"

ಕನಕಗಿರಿ ಹಾಗೂ ತಾವರಗೇರಾ ಪಟ್ಟಣದಲ್ಲಿ ಬೀದಿ ನಾಯಿಗಳನ್ನು ಹಿಡಿಯುವುದು ಹಾಗೂ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಕೊಡಿಸುವ ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ. ಸಂತಾನ ಶಕ್ತಿಹರಣ ಸರ್ಜರಿಗೆ ವೈದ್ಯರ ಕೊರತೆ ಎದುರಾಗಿದೆ. ಬೀದಿ ನಾಯಿಗಳನ್ನು ಹಿಡಿಯಲು ಕ್ರಮ ವಹಿಸಲಾಗುವುದು.

— ಮಂಜುನಾಥ ಗುಂಡೂರು ಪಿಡಿ, ಡಿಯುಡಿಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net