ಸಿದ್ದಾಪುರ ಸಮೀಪದ ಮುಸ್ಟೂರಿನಲ್ಲಿ ರೈತರಿಗೆ ನ್ಯಾನೋ ರಸಗೊಬ್ಬರ ಕುರಿತು ತರಬೇತಿ ನೀಡಲಾಯಿತು. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಅಭಿಲಾಷಾ, ಕೃಷಿ ಅಧಿಕಾರಿ ಸುಧಾಕರ್, ಕೃಷಿ ವಿಜ್ಞಾನಿಗಳಾದ ಡಾ.ರಾಧಾ, ರೇವತಿ ಇತರರಿದ್ದರು.
ಸಿದ್ದಾಪುರ: ಮಣ್ಣಿನ ಫಲವತ್ತತೆ ಹಾಗೂ ಸತ್ವ ಉಳಿಸಿಕೊಳ್ಳಲು ರೈತರು ಕ್ರಿಮಿನಾಶಕಗಳ ಬಳಕೆ ಕಡಿಮೆ ಮಾಡಬೇಕು ಎಂದು ಕೃಷಿ ಅಧಿಕಾರಿ ವೈ. ಸುಧಾಕರ್ ಹೇಳಿದರು.
ಸಮೀಪದ ಮುಸ್ಟೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆವರಣದಲ್ಲಿ ಸಿದ್ದಾಪುರ ರೈತ ಸಂಪರ್ಕ ಕೇಂದ್ರ, ಗಂಗಾವತಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ವಡ್ಡರಹಟ್ಟಿಯ ಕೃಷಿ ತರಬೇತಿ ಕೇಂದ್ರದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದ್ದು, ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ನ್ಯಾನೋ ಗೊಬ್ಬರ ಬಳಕೆಗೆ ಒತ್ತು ನೀಡಬೇಕು. ಕಡಿಮೆ ಪ್ರಮಾಣದ ಕ್ರಿಮಿನಾಶಕ ಬಳಸಿ. ಆರೋಗ್ಯಯುತ ಜೀವನ ನಡೆಸಿ. ಜತೆಗೆ ಮಣ್ಣಿನ ಆರೋಗ್ಯ, ರಸಗೊಬ್ಬರಗಳ ವೈಜ್ಞಾನಿಕ ಬಳಕೆ ಹಾಗೂ ಪರ್ಯಾಯ ಗೊಬ್ಬರಗಳ ಬಳಕೆ ಕುರಿತು ಮಾಹಿತಿ ನೀಡಿದರು. ಕೃಷಿ ವಿಜ್ಞಾನಿ ಡಾ.ರಾಧಾ ಮಾತನಾಡಿ, ವಾತಾವರಣಕ್ಕೆ ಅನುಗುಣವಾಗಿ ರೈತರು ದೀರ್ಘಾವಧಿ ತಳಿಗಳ ಬದಲಾಗಿ ಅಲ್ಪಾವಧಿ ಭತ್ತದ ತಳಿ ಆಯ್ಕೆ ಮಾಡಿಕೊಳ್ಳಬೇಕು. ಬೀಜೋಪಚಾರ ಮಾಡುವುದರಿಂದ ಭತ್ತದ ಬೆಳೆಯಲ್ಲಿ ಬರುವ ಹಲವು ಕೀಟ ಮತ್ತು ರೋಗ ಭಾದೆ ತಡೆಗಟ್ಟಬಹುದು ಎಂದು ತಿಳಿಸಿದರು.
ಕೃಷಿ ಇಲಾಖೆ ಎ.ಡಿ. ಡಾ.ಅಭಿಲಾಷಾ, ಕೃಷಿ ವಿಜ್ಞಾನಿ ರೇವತಿ, ಇಫ್ಕೊ ಸಂಸ್ಥೆಯ ಅಧಿಕಾರಿ ರಾಘವೇಂದ್ರ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಬೀರಪ್ಪ, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಕೃಷಿ ಇಲಾಖೆಯ ವಿದ್ಯಾವತಿ ಇತರರಿದ್ದರು.