ಈ ಹಿಂದೆ ಪತ್ರಿಕೆ, ಟಿವಿ, ರೇಡಿಯೋದಂತಹ ಸಾಂಪ್ರದಾಯಿಕ ಸಮೂಹ ಸಂವಹನಗಳಿಗೆ ಸೀಮಿತವಾಗಿದ್ದ ಮಾಧ್ಯಮ ಕ್ಷೇತ್ರ ಇಂದು ಇಂಟರ್‌ನೆಟ್ ಪ್ರಗತಿ ಕಾರಣಕ್ಕಾಗಿ ಹೆಚ್ಚು ವಿಶಾಲವಾಗಿ ಹರಡಿಕೊಂಡಿದೆ. ಒಟಿಟಿ, ಬ್ಲಾಗಿಂಗ್, ಸ್ಟ್ರೀಮಿಂಗ್, ಪಾಡ್ಕಾಸ್ಟ್ ಸೇರಿದಂತೆ ವಿವಿಧ ಬಗೆಯ ಆನ್ಲೈನ್ ಆಧಾರಿತ ವೇದಿಕೆಗಳನ್ನು ಜನ ಹೆಚ್ಚಾಗಿ ಬಳಸುತ್ತಿರುವುದರಿಂದ ಹೊಸ-ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಗಳಿಕೆಗಾಗಿ ಯಾವುದಾದರೂ ಮಾಧ್ಯಮ ಸಂಸ್ಥೆಗೆ ಕೆಲಸಕ್ಕೆ ಸೇರಬೇಕು ಅಂತ ಇಲ್ಲ. ಪ್ರತಿಭೆ ಜತೆಗೆ ಕಲೆ ಹಾಗೂ ಸೃಜನಶೀಲತೆ ಇದ್ದರೆ ವಿಷಯಗಳನ್ನು ಸೃಜಿಸಿ ಕೂಡ, ಇದ್ದಲ್ಲೇ ಲಕ್ಷಾಂತರ ರೂಪಾಯಿ ಗಳಿಸಬಹುದು. ಮಾಧ್ಯಮ ವಿದ್ಯಾರ್ಥಿಗಳಿಗೆ ಓದು ಮತ್ತು ಬರಹ ತುಂಬಾ ಮುಖ್ಯ. ಇದರೊಂದಿಗೆ ಕೆಲವು ಕೌಶಲಗಳನ್ನು ಕಲಿಯುವುದರಿಂದ ಖಂಡಿತಾ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿ ಅವಕಾಶಗಳನ್ನು ಪಡೆಯಬಹುದು. ಉತ್ತಮ ಭವಿಷ್ಯಕ್ಕಾಗಿ ಜ್ಞಾನದ ಜತೆಗೆ ಕೌಶಲ್ಯ ಹೆಚ್ಚಿಸಿಕೊಳ್ಳುವ ಕಡೆಗೆ ವಿದ್ಯಾರ್ಥಿಗಳು ಗಮನ ಕೊಡಬೇಕು ಎಂದರು.