ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕ.ಕ. ಕಲಾವಿದರ ಒಕ್ಕೂಟದ ಜಿಲ್ಲಾ ಸಮಿತಿಯಿಂದ ಕೊಪ್ಪಳ ಡಿಸಿ ಡಾ. ಸುರೇಶ ಬಿ.ಇಟ್ನಾಳಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಡಿ.ಎಸ್. ಪೂಜಾರ, ಲಕ್ಷ್ಮಣ ಪಿರಗಾರ, ಶರಣು ಶೆಟ್ಟರ್, ಮುತ್ತಣ್ಣ ವಿಶ್ವಕರ್ಮ, ಮುತ್ತಣ್ಣ ತೊಂಡಿಹಾಳ ಇದ್ದರು.
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾ ಸಮಿತಿ ಒತ್ತಾಯ
ಡಿಸಿ ಡಾ.ಸುರೇಶ ಬಿ.ಇಟ್ನಾಳಗೆ ಮನವಿ
ಕೊಪ್ಪಳ: ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾ ಸಮಿತಿಯಿಂದ ಗುರುವಾರ ಡಿಸಿ ಡಾ. ಸುರೇಶ ಬಿ.ಇಟ್ನಾಳ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಿವಿಧ ಪ್ರಕಾರದ ಹಾಗೂ ಎಲ್ಲ ವಯೋವಾನದ ಕಲಾವಿದರು ಕಾರ್ಯನಿರ್ವಹಿಸುತ್ತಿದ್ದು, ಮೂಲಸೌಕರ್ಯಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ನನೆಗುದಿಗೆ ಬಿದ್ದಿರುವ ಜಿಲ್ಲಾ ರಂಗಮಂದಿರವನ್ನು ಶ್ರೀ ಉದ್ಘಾಟಿಸಿ ಕಲಾವಿದರ ಬಳಕೆಗೆ ನೀಡಬೇಕು. ಹಿರಿಯ ಕಲಾವಿದರ ವಾಸಾಶನವನ್ನು ಸಮಯಕ್ಕೆ ಸರಿಯಾಗಿ ವಿತರಿಸುವುದರ ಜತೆಗೆ ಗೌರವಧನವನ್ನು 5 ಸಾವಿರಕ್ಕೆ ಹೆಚ್ಚಿಸಬೇಕು. ಕಲಾವಿದರಿಗೆ ಗುರುತಿನ ಚೀಟಿ ಹಾಗೂ ಉಚಿತ ಬಸ್‌ಪಾಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿತು.
ಸಾಹಿತ್ಯ ಭವನವನ್ನು ನವೀಕರಿಸಿ ಧ್ವನಿ, ಬೆಳಕು, ಜನರೇಟರ್, ಶೌಚಗೃಹ ಹಾಗೂ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಬೇಕು. 2016ರಲ್ಲಿ ಆರಂಭವಾದ ಗಾಂಧಿ ಭವನ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟಿಸಬೇಕು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಮರು ಆರಂಭಿಸಬೇಕು. ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿರುವ ಕನಕಗಿರಿ ಮತ್ತು ಆನೆಗುಂದಿ ಉತ್ಸವಗಳನ್ನು ಶ್ರೀ ಆಯೋಜಿಸಿ ಸ್ಥಳೀಯ ಕಲಾವಿದರು ಹಾಗೂ ಕಲಾತಂಡಗಳಿಗೆ ಆದ್ಯತೆ ನೀಡಬೇಕು. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಹೋರಾಟ ರೂಪಿಸಲಾಗುವುದೆಂದು ಒಕ್ಕೂಟ ಎಚ್ಚರಿಸಿತು.
ಕ.ಕ. ಕಲಾವಿದರ ಒಕ್ಕೂಟದ ಜಿಲ್ಲಾ ಟಕದ ಗೌರವಾಧ್ಯಕ್ಷ ಡಿ.ಎಸ್. ಪೂಜಾರ, ಜಿಲ್ಲಾಧ್ಯಕ್ಷ ಲಕ್ಷ್ಮಣ ಪಿರಗಾರ, ಕಾರ್ಯದರ್ಶಿ ಶರಣು ಶೆಟ್ಟರ್, ಪದಾಧಿಕಾರಿಗಳಾದ ಮುತ್ತಣ್ಣ ವಿಶ್ವಕರ್ಮ, ಮುತ್ತಣ್ಣ ತೊಂಡಿಹಾಳ, ವೆಂಕಟೇಶ ಹೊಸಮನಿ, ರಾಮಣ್ಣ ಕುಣಿಕೇರಿ, ಸಂಗಪ್ಪ ಕುಂಬಾರ ಇತರರಿದ್ದರು.