ಗಂಗಾವತಿ: ಜಾತಿ ಗಣತಿ ವಿಚಾರದಲ್ಲಿ ಬದ್ಧತೆ ರಾಜಕಾರಣದ ಕೊರತೆಯಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯವಾಗಿದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ನಗರಸಭೆ ಮಾಜಿ ಸದಸ್ಯ ಪರಶುರಾಂ ಮಡ್ಡೇರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಒಬಿಸಿ ಸಮುದಾಯದ ಆಶೋತ್ತರಗಳನ್ನು ಕಾಂಗ್ರೆಸ್ ಸರ್ಕಾರ ತಿರಸ್ಕರಿಸಿದ್ದು, ಜಾತಿ ಗಣತಿಗೆ 600ಕೋಟಿ ರೂ. ತೆರಿಗೆ ಹಣ ವ್ಯಯಿಸಿ ಕೈ ತೊಳೆದುಕೊಂಡಿದೆ. 10ವರ್ಷದ ನಂತರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಜಾತಿ ಜನಗಣತಿ ವರದಿ ಮೂಲೆ ಸೇರಿತು.
ಅನ್ಯರಾಜ್ಯದಲ್ಲಿ ಗಣತಿ ಒಂದು ವರ್ಷದಲ್ಲಿ ಪೂರ್ಣಗೊಳಿಸಿದ್ದರೆ, ಕಾಂಗ್ರೆಸ್ 10 ವರ್ಷದ ಕಾಲಹರಣ ಮಾಡಿ ಒಬಿಸಿ ಸಮುದಾಯಗಳ ದಿಕ್ಕುತಪ್ಪಿಸಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್ ನಾಯಕ್ ನೇತತ್ವದಲ್ಲಿ ಮತ್ತೊಮ್ಮೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಘೋಷಿಸಲಾಯಿತು.
ಮೂರು ತಿಂಗಳಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದ್ದ ಸರ್ಕಾರ, ಕೊನೆಗೂ ಮರೆತಿದೆ. ಬಜೆಟ್ ಇದ್ದಿದ್ದರೆ ಆಯೋಗ ಚುರುಕಾಗಿ ಕಾರ್ಯನಿರ್ವಹಿಸಬಹುದಾಗಿತ್ತು, ಕೇಂದ್ರ ಸರ್ಕಾರವೇ ಅಧಿಕತವಾಗಿ ಜಾತಿ ಜನಗಣತಿ ಸಿದ್ಧತೆ, ಪ್ರಕ್ರಿಯೆ ಆರಂಭಿಸಿದ್ದು, ರಾಜ್ಯದ ಜನತೆಗೆ ಸಾಮಾಜಿಕ ನ್ಯಾಯ ದೊರಕಬೇಕಿದೆ ಎಂದರು.