ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ನೀಲಕಂಠ ಬಡಿಗೇರ ಅಭಿಪ್ರಾಯ
ಕನಕಗಿರಿ ಸಾವಿತ್ರಿಬಾಯಿ ಫುಲೆ ಜಯಂತಿ
ಕನಕಗಿರಿ: ಎಲ್ಲ ವರ್ಗದ ಮಹಿಳೆಯರು ಅಕ್ಷರ ಜ್ಞಾನ ಹೊಂದಿದರೆ ಮಾತ್ರ ಸಮಾಜ ಅಭಿವೃದ್ಧಿಯಾಗಲು ಸಾಧ್ಯ ಎಂದು ಅರಿತ ಸಾವಿತ್ರಿಬಾಯಿ ಫುಲೆ ಎಲ್ಲರಿಗೂ ಶಿಕ್ಷಣ ನೀಡಲು ಮುಂದಾದರು ಎಂದು ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ನೀಲಕಂಠ ಬಡಿಗೇರ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೀಮಾ ಕೋರೆಗಾಂವ್ ಯುದ್ಧದಲ್ಲಿ ಜಯಿಸಿದ ಮಹಾರ್ ಸೈನಿಕರ ಶ್ರಮದ ಫಲವಾಗಿ ದೊರೆತ ಶಿಕ್ಷಣದ ಹಕ್ಕಿನಿಂದ ಜ್ಯೋತಿಬಾ ಫುಲೆ ಶಿಕ್ಷಣ ಪಡೆದು ತಮ್ಮ ಪತ್ನಿ ಸಾವಿತ್ರಿಬಾಯಿ ಫುಲೆ ಅವರಿಗೂ ಶಿಕ್ಷಣ ನೀಡಿದರು. ಸಾವಿತ್ರಿಬಾಯಿ ಫುಲೆ ಇತರರಿಗೂ ಶಿಕ್ಷಣ ನೀಡಲು ಮುಂದಾದಾಗ ಮೇಲ್ಜಾತಿಯವರಿಂದ ಅವಮಾನಗಳನ್ನು ಎದುರಿಸಬೇಕಾಯಿತು. ಆದರೂ ಅವರ ಕಂಡ ಕನಸು ಯಶಸ್ವಿಯಾಗಿದ್ದು, ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಸಮಾನರಾಗಿ ನಿಂತಿದ್ದಾರೆ ಎಂದರು.
ಪಪಂ ನಾಮನಿರ್ದೇಶಿತ ಸದಸ್ಯ ಶಾಂತಪ್ಪ ಬಸರಿಗಿಡ ಮಾತನಾಡಿ, ಸಾವಿತ್ರಿಬಾಯಿ ಫುಲೆ ಸತ್ಯ ಶೋಧಕ ಸಮಾಜ ಸಂಸ್ಥೆ ಕಟ್ಟಿಕೊಂಡು ಶಾಲೆಗಳನ್ನು ಪ್ರಾರಂಭಿಸಿ ಶೋಷಿತ ಸಮಾಜದ ಎಲ್ಲರಿಗೂ ಶಿಕ್ಷಣ ನೀಡಿದ್ದಾರೆ ಎಂದರು.
ಪಪಂ ಸದಸ್ಯ ಶೇಷಪ್ಪ ಪೂಜಾರ್ ಮಾತನಾಡಿ, ಸಾವಿತ್ರಿಬಾಯಿ ಫುಲೆ ಎಲ್ಲ ವರ್ಗದ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ದೇಶದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಎಂದು ಹೆಸರಾಗಿದ್ದಾರೆ ಎಂದು ತಿಳಿಸಿದರು.