ಸಿಡಿಲಿಗೆ ಆರು ಆಕಳು ಬಲಿ

ಗಂಗಾವತಿಯ ಗುಂಡಮ್ಮಕ್ಯಾಂಪ್‌ನಲ್ಲಿ ರಸ್ತೆ ಮೇಲೆ ಕೊಳಚೆ ನೀರು ನಿಂತಿರುವುದು ಮತ್ತು ಗಂಗಾವತಿಯಲ್ಲಿ ಸುರಿದ ಮಳೆ, ಬೀಸಿದ ಗಾಳಿಯಿಂದ ಹೊಸಳ್ಳಿ ಸಂಪರ್ಕ ರಸ್ತೆಯಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿರುವುದು.
ಗಂಗಾವತಿಯ ಗುಂಡಮ್ಮಕ್ಯಾಂಪ್‌ನಲ್ಲಿ ರಸ್ತೆ ಮೇಲೆ ಕೊಳಚೆ ನೀರು ನಿಂತಿರುವುದು ಮತ್ತು ಗಂಗಾವತಿಯಲ್ಲಿ ಸುರಿದ ಮಳೆ, ಬೀಸಿದ ಗಾಳಿಯಿಂದ ಹೊಸಳ್ಳಿ ಸಂಪರ್ಕ ರಸ್ತೆಯಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧೆಡೆ ಗುಡುಗು, ಗಾಳಿಸಹಿತ ಭಾರಿ ಮಳೆ
  • ಗಂಗಾವತಿ ಜನಜೀವನ ಅಸ್ತವ್ಯಸ್ತ
ಗಂಗಾವತಿ: ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸುರಿದ ಮಳೆ ಮತ್ತು ಬೀಸಿದ ಗಾಳಿಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಸಿಡಿಲಿಗೆ 6 ಆಕಳುಗಳು ರಾತ್ರಿ ಮೃತಪಟ್ಟಿವೆ.
ಸಿದ್ದಿಕೇರಿ ಹೊಲವೊಂದರಲ್ಲಿ ಹಾಕಿದ್ದ ಹಟ್ಟಿಯಲ್ಲಿದ್ದ ಕನಕಗಿರಿ ತಾಲೂಕಿನ ಬಂಕಾಪುರದ ಪಾರ್ವತೆಮ್ಮ ಸಣ್ಣ ಯಂಕಪ್ಪ ಬಂಡ್ರ ಮತ್ತು ನಾಗೇಶ ಬಂಡ್ರ ಎಂಬುವರಿಗೆ ಸೇರಿದ 6 ಅಕಳುಗಳು ಮೃತಪಟ್ಟಿವೆ. ಸ್ಥಳಕ್ಕೆ ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೈಯ್ಯದ್ ಜಾಕೀರ್, ಕಂದಾಯ ನಿರೀಕ್ಷ ಎಸ್.ಬಷೀರುದ್ದೀನ್ ಮತ್ತು ಗ್ರಾಮಾಡಳಿತಾಧಿಕಾರಿ ಮಂಜುನಾಥ ದುಮ್ಮಾಡಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.
ರಸ್ತೆ ಮೇಲೆಲ್ಲ ನೀರು: ಅಕಾಲಿಕ ಮಳೆಯಿಂದ ನಗರದ ಗುಂಡಮ್ಮಕ್ಯಾಂಪ್, ಚಂದ್ರಹಾಸ ಥಿಯೇಟರ್ ರಸ್ತೆ, ಎಚ್‌ಆರ್‌ಎಸ್ ಕಾಲನಿ, ಮುಜಾವರ ಕ್ಯಾಂಪ್‌ನಲ್ಲಿ ನೀರು ನಿಂತಿದ್ದು, ಕೆಲವೆಡೆ ಮನೆಗಳಿಗೆ ನುಗ್ಗಿವೆ. ಚರಂಡಿಯಲ್ಲಿ ಹೂಳು ತುಂಬಿದ್ದರಿಂದ ಕೊಳಚೆ ನೀರೆಲ್ಲ ರಸ್ತೆ ಮೇಲೆ ಹರಿದಾಡಿದೆ. ಹೊಸಳ್ಳಿ ಸಂಪರ್ಕ ರಸ್ತೆಯಲ್ಲಿನ ವಿದ್ಯುತ್ ಕಂಬ ಮುರಿದು ಬಿದ್ದಿದ್ದರೇ, ವಡ್ಡರಹಟ್ಟಿಯ ಹುಳ್ಳಿಡಗ್ಗಿ ಮುಖ್ಯರಸ್ತೆಯಲ್ಲಿ ಮರವೊಂದು ನೆಲಕ್ಕುರುಳಿದ ಪರಿಣಾಮ ಸಂಚಾರಕ್ಕೆ ತೊಂದರೆಯಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಜನ ಪರದಾಡಿದರು. ಗಂಗಾವತಿಯಲ್ಲಿ 11ಮಿ.ಮೀ. ಮತ್ತು ಪ್ರಗತಿನಗರದಲ್ಲಿ 8.3 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net