ಸಭೆಗೆ ಬಾರದ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್

ಗಂಗಾವತಿ ತಾಪಂ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಉಪಹಂಚಿಕೆ ತಾಲೂಕು ಮಟ್ಟದ ವಿಶೇಷ ಸಭೆಯಲ್ಲಿ ತಾಪಂ ಇಒ ರಾಮರೆಡ್ಡಿ ಪಾಟೀಲ್ ಗುರುವಾರ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹುಲುಗಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಸರಸ್ವತಿ ಇತರರಿದ್ದರು.
ಗಂಗಾವತಿ ತಾಪಂ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಉಪಹಂಚಿಕೆ ತಾಲೂಕು ಮಟ್ಟದ ವಿಶೇಷ ಸಭೆಯಲ್ಲಿ ತಾಪಂ ಇಒ ರಾಮರೆಡ್ಡಿ ಪಾಟೀಲ್ ಗುರುವಾರ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹುಲುಗಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಸರಸ್ವತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ರಾಮರೆಡ್ಡಿ ಪಾಟೀಲ್ ಹೇಳಿಕೆ
  • ಮತ್ತೆ ಮತ್ತೆ ಗೈರಾದರೆ ಕೇಸ್ ದಾಖಲು ಎಚ್ಚರಿಕೆ
ಗಂಗಾವತಿ: ಮೀಸಲು ವರ್ಗದ ಯೋಜನೆ ಅನುಷ್ಠಾನ ಪರಿಶೀಲನೆ ಸಭೆಗೆ ಬಾರದ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಲಾಗುತ್ತಿದ್ದು, ಪ್ರಕರಣ ದಾಖಲಿಸಲು ಕಾಯ್ದೆಯಲ್ಲಿ ಅವಕಾಶವಿದೆ ಎಂದು ತಾಪಂ ಇಒ ರಾಮರೆಡ್ಡಿ ಪಾಟೀಲ್ ಹೇಳಿದರು.
ನಗರದ ತಾಪಂ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಉಪಹಂಚಿಕೆ ತಾಲೂಕು ಮಟ್ಟದ ವಿಶೇಷ ಸಭೆಯಲ್ಲಿ ಮಾತನಾಡಿದರು.
ಪ್ರತಿ ಇಲಾಖೆಯಲ್ಲಿ ಒಟ್ಟು ಅನುದಾನದ ಶೇ.25 ಹಣವನ್ನು ಮೀಸಲು ವರ್ಗಕ್ಕೆ ಬಳಕೆ ಮಾಡಬೇಕಿದ್ದು, ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಸಭೆಯನ್ನು ನಿರ್ಲಕ್ಷಿಸುವಂತಿಲ್ಲ. ಕಳೆದೆರೆಡು ಸಭೆಗೂ ಬಹುತೇಕ ಅಧಿಕಾರಿಗಳು ಬಂದಿಲ್ಲ. ಶೇ.100 ಗುರಿ ಸಾಧಿಸಬೇಕಿದ್ದು, ನೆಪ ಹೇಳುವಂತಿಲ್ಲ. ಮಾಹಿತಿ ಇಲ್ಲದೇ ಬರುವ ಪ್ರತಿನಿಧಿಗಳ ವಿರುದ್ಧ ಕ್ರಮಕ್ಕೆ ಶಿಾರಸು ಮಾಡಲಾಗುವುದು. ಕೆಲ ತಾಂಡಾಗಳಿಗೆ ಇದುವರೆಗೂ ಬಸ್ ಸೌಲಭ್ಯವಿಲ್ಲದಿರುವ ಬಗ್ಗೆ ಮಾಹಿತಿಯಿದ್ದು, ಪರಿಶೀಲಿಸಿ ಸಂಚಾರ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.
ಅರಣ್ಯ ನಿವಾಸಿಗಳ ಹಕ್ಕುಪತ್ರಕ್ಕಾಗಿ 224 ಅರ್ಜಿಗಳಿದ್ದು, 172 ಅರ್ಜಿಗಳಿಗೆ ಜಿಲ್ಲಾಡಳಿತದಿಂದ ಅನುಮೋದನೆ ದೊರೆತಿದೆ. ಆದರೆ 4 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸೂಕ್ತ ದಾಖಲೆಗಳ ಕೊರತೆಯಿಂದ ಯಡೇಹಳ್ಳಿ, ಮುಕ್ಕಂಪಿ, ಚಿಕ್ಕಬೆಣಕಲ್, ಹಿರೇಬೆಣಕಲ್, ಉಡುಮಕಲ್ ವ್ಯಾಪ್ತಿಯ ಅರ್ಜಿಗಳನ್ನು ಇನ್ನೂ ವಿಲೇವಾರಿ ಮಾಡಿಲ್ಲವೆಂದು ಅರಣ್ಯ ಸಹಾಯಕ ಶಾಮೀದ್ ಮಾಹಿತಿ ನೀಡಿದರು. ಮತ್ಸೃ ಯೋಜನೆಯಡಿ ಈಗಾಗಲೇ ಅರ್ಹ ಲಾನುಭವಿಗಳಿಗೆ ನೆರವು ನೀಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಇನ್ನೂ ಅನುದಾನ ಬಂದಿಲ್ಲ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಆನಂದ ಪಾಟೀಲ್ ತಿಳಿಸಿದರು.
ಮೀಸಲು ವರ್ಗದವರಿಗೆ 23 ಪಡಿತರ ವಿತರಣೆ ಕೇಂದ್ರಗಳಿದ್ದು, ಹೊಸದಾಗಿ ಇನ್ನೂ ಅರ್ಜಿ ಸ್ವೀಕಾರವಾಗಿಲ್ಲ. ಜೂನ್ ತಿಂಗಳ ಪಡಿತರ ವಿತರಿಸಲಾಗಿದೆ ಎಂದು ಆಹಾರ ನಿರೀಕ್ಷಕ ಶೇಖರಪ್ಪ ಮಾಹಿತಿ ನೀಡಿದರು. ಶಾಲೆಗಳ ದುರಸ್ತಿ, ಹೊಸ ಕಟ್ಟಡ ನಿರ್ಮಾಣ ಮತ್ತು ಇತರ ಸೌಲಭ್ಯಗಳಿಗಾಗಿ ಈಗಾಗಲೇ ಶಿಕ್ಷಣ ಇಲಾಖೆಯಿಂದ ಪ್ರಸ್ತಾವನೆ ಬಂದಿದ್ದು, ಆದ್ಯತೆ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಜಿಪಂ ಇಂಜಿನಿಯರಿಂಗ್ ವಿಭಾಗದ ಪ್ರಭಾರ ಎಇಇ ಪಲ್ಲವಿ ಹೇಳಿದರು.
ನಗರ ವ್ಯಾಪ್ತಿಯ ಹಾಸ್ಟೆಲ್‌ಗಳಿಗೆ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ನಗರಸಭೆಯ ಮೀಸಲು ಅನುದಾನದಲ್ಲಿ ಒದಗಿಸಲು ಅವಕಾಶವಿದ್ದು, ಕೂಡಲೇ ಕ್ರಿಯಾಯೋಜನೆ ರೂಪಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹುಲುಗಪ್ಪ ನಗರಸಭೆ ಸಮುದಾಯ ಸಂಘಟಕಿ ಲಕ್ಷ್ಮೀದೇವಿಗೆ ಸೂಚಿಸಿದರು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಎಪಿಎಂಸಿ, ಸಿಡಿಪಿಒ, ಲೋಕೋಪಯೋಗಿ ಮತ್ತು ಪಶು ಸಂಗೋಪನಾ ಇಲಾಖೆಯಲ್ಲಿನ ಮೀಸಲು ವರ್ಗದ ಯೋಜನೆ ಮತ್ತು ಅನುಷ್ಠಾನ ಪ್ರಮಾಣ ಕುರಿತು ಚರ್ಚಿಸಲಾಯಿತು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ. ಸರಸ್ವತಿ, ಆರಣ್ಯ ಸಹಾಯಕ ರಾಘವೇಂದ್ರ, ಸಿಡಿಪಿಒ ಶರಣಪ್ಪ ಗದ್ದಿ, ಜೆಸ್ಕಾಂ ಎಇಇ ವಿ.ಮಂಜುನಾಥ ಇತರರಿದ್ದರು.

ಬಳಕೆಯಾಗದ ಮೀಸಲು ಯೋಜನೆ

ಸಭೆಗೆ ಬಹುತೇಕ ಅಧಿಕಾರಿಗಳು ಗೈರಾಗಿದ್ದು, ಹಾಜರಾಗಿದ್ದ ಅಧೀನ ಸಿಬ್ಬಂದಿಯಲ್ಲೂ ಸ್ಪಷ್ಟ ಉತ್ತರವಿರಲಿಲ್ಲ. ಕೆಲವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಸ್ಪಂದಿಸಲಿಲ್ಲ. ಗೈರಾದ ಅಧಿಕಾರಿಗಳ ವಿರುದ್ಧ ಇಒ ರಾಮರೆಡ್ಡಿ ಪಾಟೀಲ್ ಗರಂ ಆಗಿದ್ದು, ಶೋಕಾಸ್ ನೋಟಿಸ್ ನೀಡಲು ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗೆ ಸೂಚಿಸಿದರೆಲ್ಲದೇ, ಪ್ರಕರಣ ದಾಖಲಿಸಲು ಅವಕಾಶವಿರುವ ಕಾಯ್ದೆ ಬಗ್ಗೆ ತಿಳಿಸಿದರು. ಪರಿಶೀಲನೆ ಸಭೆಯಲ್ಲಿ ಮೀಸಲು ವರ್ಗದ ಯೋಜನೆ ಬಳಕೆಯಾಗದಿರುವುದು ಕಂಡು ಬಂದಿದ್ದು, ಕೆಲ ಇಲಾಖೆಯಲ್ಲಿ ಶೇ.5 ಮೀಸಲಿಟ್ಟಿಲ್ಲ. ಎಲ್ಲ ಇಲಾಖೆಯಿಂದ ಮೀಸಲು ಪ್ರಮಾಣ ಮತ್ತು ಅನುಷ್ಠಾನದ ಬಗ್ಗೆ ಮಾಹಿತಿ ನೀಡುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
"

ಮೀಸಲು ವರ್ಗದ ಯೋಜನೆಗಳನ್ನು ಸಮರ್ಪಕ ಅನುಷ್ಠಾನಗೊಳಿಸಬೇಕಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ಕಾಟಾಚಾರಕ್ಕೆ ಯೋಜನೆ ರೂಪಿಸುವಂತಿಲ್ಲ.

— ರಾಮರೆಡ್ಡಿ ಪಾಟೀಲ್ ತಾಪಂ ಇಒ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net