ಅನ್ಸಾರಿಗೆ ಶೋಕಾಸ್, ಬಿಡುವರೇ ಕಾಂಗ್ರೆಸ್ ?

1. ಕೆಪಿಸಿಸಿ ನೀಡಿದ ಶೋಕಾಸ್ ನೋಟಿಸ್. 2. ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿಯಾದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ.
1. ಕೆಪಿಸಿಸಿ ನೀಡಿದ ಶೋಕಾಸ್ ನೋಟಿಸ್. 2. ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿಯಾದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ.
Published on

ಪ್ರಮುಖ ಮುಖ್ಯಾಂಶಗಳು

  • ಗಂಗಾವತಿ ಕೆಪಿಸಿಸಿಯಿಂದ ಅನ್ಸಾರಿಗೆ ನೋಟಿಸ್
  • KPCC issues notice to Ansari from Gangavathi
ಗಂಗಾವತಿ: ಸ್ವಪಕ್ಷೀಯರ ವಿರುದ್ಧ ವಾಗ್ದಾಳಿ ನಡೆಸಿ, ಮುಖಂಡರು, ಕಾರ್ಯಕರ್ತರ ಮುಜುಗರಕ್ಕೆ ಕಾರಣವಾಗಿದ್ದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಕೆಪಿಸಿಸಿ ಶೋಕಾಸ್ ನೋಟಿಸ್ ನೀಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಪರಾಭವಗೊಂಡ ನಂತರ ಸ್ವಪಕ್ಷೀಯರ ವಿರುದ್ಧ ಆಡಿಯೋ ಮತ್ತು ವಿಡಿಯೋ ಮೂಲಕ ಹರಿಹಾಯ್ದಿದ್ದು, ರಾಜ್ಯ ಸರ್ಕಾರದ ವರ್ಗಾವಣೆ ದಂಧೆ ಬಯಲು ಮಾಡಿದ್ದರು.
ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ್ ಹಿಟ್ನಾಳ, ಸಚಿವ ಬಸವರಾಜ ರಾಯರಡ್ಡಿ ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಸೋಲಿಸುವ ದಾಟಿಯಲ್ಲಿ ಮಾತನಾಡಿದ್ದರು. ಸೋಲಿನ ಹತಾಶೆಯಲ್ಲಿ ಸ್ವಪಕ್ಷದವರ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಅನ್ಸಾರಿ ಮೇಲೆ ನಿಗಾವಹಿಸಿದ್ದ ಹೈಕಮಾಂಡ್, ಲಿಖಿತ ದೂರು ನೀಡಲು ಜಿಲ್ಲೆಯ ಮುಖಂಡರು ಮತ್ತು ಪದಾಧಿಕಾರಿಗಳಿಗೆ ಸೂಚಿಸಿದ್ದರು. ಡಿಸಿಸಿ ಅಧ್ಯಕ್ಷ ಚುನಾವಣೆ ಸಭೆಯಲ್ಲಿ ಪಾಲ್ಗೊಳ್ಳದೆ, ಬೆಂಬಲಿಗರನ್ನೂ ಕಳಿಸದೆ ನಿರ್ಲಕ್ಷ್ಯವಹಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪಕ್ಷ ಮತ್ತು ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಂದೇಶ ರವಾನೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎಂ.ನಾರಾಯಣಸ್ವಾಮಿ ಅವರು, ಸೆ.1ರಂದು ಅನ್ಸಾರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. 7 ದಿನಗಳೊಳಗೆ ಉತ್ತರಿಸುವಂತೆ ನೋಟಿಸ್‌ನಲ್ಲಿ ತಿಳಿಸಿದ್ದು, ಡಿಸಿಸಿ ಹಿಂದಿನ ಅಧ್ಯಕ್ಷ ಅಮರೇಗೌಡ ಬಯ್ಯಪುರ ಅವರಿಗೂ ನೋಟಿಸ್ ಪ್ರತಿ ಕಳುಹಿಸಿದ್ದಾರೆ. ಡಿಸಿಸಿ ಹೊಸ ಅಧ್ಯಕ್ಷರ ನೇಮಕ ಬೆನ್ನಲ್ಲಿ ಶೋಕಾಸ್ ನೋಟಿಸ್ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಅನ್ಸಾರಿಯ ಮುಂದಿನ ನಡೆ ಬಗ್ಗೆ ಬೆಂಬಲಿಗರು ಕುತೂಹಲದಿಂದ ಕಾಯುತ್ತಿದ್ದಾರೆ.
ಉಚ್ಚಾಟನೆ ಸಾಧ್ಯತೆ: ಕಳೆದ ವಿಧಾನಸಭೆ ಚುನಾವಣೆಯಿಂದ ಅಂತರ ಕಾಯ್ದುಕೊಂಡಿರುವ ಅನ್ಸಾರಿ, ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ. ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದು, ಕಾರ್ಯಕರ್ತರಿಗೂ ಸಿಗುತ್ತಿಲ್ಲ. ಮುಖಂಡರ ನಡುವಿನ ವೈಮನಸ್ಸು ಪಕ್ಷ ಸಂಘಟನೆ ಮೇಲೆ ಪರಿಣಾಮ ಬೀರಿದ್ದು, ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ. ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ ಮುಂದಿಟ್ಟುಕೊಂಡು ಹೈಕಮಾಂಡ್‌ಗೆ ಬ್ಲಾೃಕ್‌ಮೇಲ್ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಹಲವು ಸಂದೇಶಗಳು ಸಾಕ್ಷಿಯಾಗಿವೆ. ಇದೇ ಕಾರಣಕ್ಕೆ ಶೋಕಾಸ್ ನೋಟಿಸ್ ನೀಡಿದ್ದು, ಉಚ್ಚಾಟನೆಯಾಗುವ ಸಾಧ್ಯತೆಗಳಿವೆ ಎಂದು ಪಕ್ಷದ ಹಿರಿಯ ಮುಖಂಡರು ತಿಳಿಸಿದ್ದಾರೆ. ಏತನ್ಮಧ್ಯೆ ಅನ್ಸಾರಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿದ್ದು, ಮುಂದಿನ ಬೆಳವಣಿಗೆ ಸಾಕ್ಷಿ ಸಮೇತ ತಿಳಿಸುವ ಬಗ್ಗೆ ಕಾರ್ಯಕರ್ತರಿಗೆ ಆಪ್ತ ಸಹಾಯಕನ ಮೂಲಕ ಸಂದೇಶ ರವಾನಿಸಿರುವುದು ಕುತೂಹಲ ಮೂಡಿಸಿದೆ.
ಹಸ್ತದಿಂದ ಸಿಗದ ಗೆಲುವು: ಅನ್ಸಾರಿ ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಪ್ರವೇಶಿಸಿದರೂ, ಸೂಕ್ತ ಸ್ಥಾನಮಾನ ದೊರೆಯದಿದ್ದರಿಂದ 2004ರಲ್ಲಿ ಜೆಡಿಎಸ್ ಸೇರ್ಪಡೆಯಾಗಿ ಮೊದಲ ಯತ್ನದಲ್ಲಿ ಶಾಸಕ ಮತ್ತು ಸಂಪುಟ ದರ್ಜೆ ಸಚಿವರಾದರು. ಬದಲಾದ ರಾಜಕೀಯ ವಿದ್ಯಾಮಾನದಲ್ಲಿ 2008ರಲ್ಲಿ ಕಾಂಗ್ರೆಸ್ ಸೇರಿ ಚುನಾವಣೆಯಲ್ಲಿ ಸೋತರು. 2013ರಲ್ಲಿ ಜೆಡಿಎಸ್ ಸೇರ್ಪಡೆಯಾಗಿ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಿದರು. ಜೆಡಿಎಸ್ ಪಕ್ಷದಲ್ಲಿ ಆಂತರಿಕ ಕಚ್ಚಾಟ ಮತ್ತು ಸಿದ್ದರಾಮಯ್ಯ ಪ್ರೇರಣೆಯಿಂದ ಪುನಃ 2018ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದರೂ ಗೆಲುವು ಸಿಗಲಿಲ್ಲ. 2023ರಲ್ಲೂ ಕಾಂಗ್ರೆಸ್ ಬಿ-ಾರ್ಮ್ ದೊರೆತರೂ ಸ್ವಯಂಕೃತ ಅಪರಾಧದಿಂದ ಪರಾಭವಗೊಂಡಿದ್ದು, ಕ್ಷೇತ್ರದಿಂದ ದೂರವಾಗಿದ್ದಾರೆ. ರಾಜಕೀಯ ಬಲ ನೀಡಿದ್ದು ಜೆಡಿಎಸ್ ಆದರೆ, ಅನ್ಸಾರಿಗೆ ಒಲವಿದ್ದಿದ್ದು ಕಾಂಗ್ರೆಸ್ ಪಕ್ಷದ ಮೇಲೆ. ಮುಖಂಡರ ನಡುವಿನ ಮುಸುಕಿನ ಗುದ್ದಾಟದಿಂದ ಯಶಸ್ಸು ದೊರೆಯುತ್ತಿಲ್ಲ.
ಮುಂದಿನ ನಡೆ ನಿಗೂಢ: ಕಾಂಗ್ರೆಸ್‌ನಲ್ಲಿ ಇರಿಸುಮುರಿಸು ಉಂಟಾದಾಗ ಪಕ್ಷ ತೊರೆಯುವ ಅನ್ಸಾರಿಗೆ ಜೆಡಿಎಸ್ ಬೂಸ್ಟ್ ನೀಡಿದ್ದು, ಅಧಿಕಾರವೂ ನೀಡಿತ್ತು. ಆದರೆ, ಈ ಬಾರಿ ಜೆಡಿಎಸ್ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅನ್ಸಾರಿ ಜೆಡಿಎಸ್‌ಗೆ ಹೋಗುವುದು ಬಹುತೇಕ ಅನುಮಾನ. ಅವಮಾನ ಸಹಿಸಿಕೊಂಡು ಕಾಂಗ್ರೆಸ್‌ನಲ್ಲಿ ಉಳಿಯುವುದು ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಪಕ್ಷದಿಂದ ಉಚ್ಚಾಟನೆಗೊಂಡರೆ ಮುಂದಿನ ಪಕ್ಷದ ಆಯ್ಕೆ ದಾರಿ ಬಂದ್ ಆಗಿದ್ದು, ಪಕ್ಷೇತರರಾಗಿ ಬೆಳೆಯಲು ವೇದಿಕೆ ಸೃಷ್ಟಿಸಿಕೊಳ್ಳಬೇಕಿದೆ ಎನ್ನುತ್ತಾರೆ ಬೆಂಬಲಿಗರು. ಈ ಕುರಿತು ಮಾಹಿತಿ ಪಡೆಯಲು ಅನ್ಸಾರಿಗೆ ಸಂಪರ್ಕಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.
"

ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಕೆಪಿಸಿಸಿ ಶೋಕಾಸ್ ನೋಟಿಸ್ ನೀಡಿದ್ದು, ಅದರ ಪ್ರತಿ ನನಗೂ ಬಂದಿದೆ. ಉತ್ತರ ನೀಡಿದ್ದಾರೆಯೋ ಇಲ್ಲವೋ ಎಂಬುದು ಗೊತ್ತಿಲ್ಲ. ಮುಂದಿನ ನಿರ್ಧಾರ ಹೈಕಮಾಂಡ್ ಕೈಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net