ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರ ಕೊರತೆ

ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರ
ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರ
Published on

ಪ್ರಮುಖ ಮುಖ್ಯಾಂಶಗಳು

  • ಸಕಾಲಕ್ಕೆ ಸೇವೆ ಸಿಗದೆ ರೋಗಿಗಳ ಸಂಖ್ಯೆ ಇಳಿಮುಖ
  • ತಾವರಗೇರಾ ಆಸ್ಪತ್ರೆಗೆ ಬೇಕಿದೆ ತುರ್ತು ಚಿಕಿತ್ಸೆ
ತಾವರಗೇರಾ: ಸಾರ್ವಜನಿಕರ ಆರೋಗ್ಯ ಕಾಪಾಡಬೇಕಾದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಎದುರಾಗಿದ್ದು, ರೋಗಿಗಳು ಪರದಾಡುವಂತಾಗಿದೆ.
30 ಹಾಸಿಗೆಯ ಆಸ್ಪತ್ರೆ ಇದಾಗಿದ್ದು, ಇದಕ್ಕೆ ಐವರು ತಜ್ಞ ವೈದ್ಯರ ಅವಶ್ಯಕತೆ ಇದೆ. ಸದ್ಯ ಒಬ್ಬ ದಂತವೈದ್ಯ, ಇನ್ನೊಬ್ಬರು ಆಯುಷ್ ವೈದ್ಯರಿದ್ದು, ಇಬ್ಬರೇ ಎಲ್ಲ ತರಹದ ರೋಗಿಗಳಿಗೆ ಚಿಕಿತ್ಸೆ ನೀಡುವ ಅನಿವಾರ್ಯತೆ ಎದುರಾಗಿದೆ.
8-9 ತಿಂಗಳ ಹಿಂದೆ ಸ್ತ್ರೀರೋಗ ತಜ್ಞರಿದ್ದಾಗ ಪ್ರತಿ ತಿಂಗಳು 70-80 ಹೆರಿಗೆಗಳಾಗುತ್ತಿದ್ದವು. ಇದೀಗ ಹೆರಿಗೆಗೆ ಬರುವ ಮಹಿಳೆಯರನ್ನು ಅನುಭವ ಇರುವ ಇಬ್ಬರು ನಸಿರ್ಂಗ್ ಅಧಿಕಾರಿಗಳು ನಿಭಾಯಿಸುವಂತಾಗಿದೆ. ತುರ್ತು ಚಿಕಿತ್ಸೆಗೆ ಬರುವ ರೋಗಿಗಳನ್ನು ಅನ್ಯ ಆಸ್ಪತ್ರೆಗೆ ಕಳುಹಿಸಲು ಆಬುಲೆನ್ಸ್ ಲಭ್ಯವಿದ್ದರೂ ಚಾಲಕರ ಕೊರತೆಯಿಂದ ಸಕಾಲಕ್ಕೆ ಸೇವೆ ದೊರೆಯದಾಗಿದೆ. ಇರುವ ಒಬ್ಬ ಚಾಲಕನೇ ತುರ್ತು ಸಂದರ್ಭಗಳನ್ನು ನಿಭಾಯಿಸುತ್ತಿದ್ದಾರೆ. ಇನ್ನು ರೋಗಿಗಳ ರಕ್ತ ತಪಾಸಣೆ ಮಾಡಲು ಲ್ಯಾಬ್ ಟೆಕ್ನಿಷಿಯನ್, ಆರೋಗ್ಯ ನಿರೀಕ್ಷಣಾಧಿಕಾರಿಗಳ ಎರಡು ಸ್ಥಾನಗಳು ಖಾಲಿ ಇವೆ. ಐವರೇ ಗ್ರೂಪ್ ಡಿ. ನೌಕರರಿದ್ದು, 6 ಸ್ಥಾನಗಳು ಖಾಲಿ ಇವೆ. ಕಳೆದ ಜುಲೈ ತಿಂಗಳಲ್ಲಿ ಹೊರರೋಗಿಗಳ ವಿಭಾಗ (ಓಪಿಡಿ)ಯಲ್ಲಿ ನಿತ್ಯ 350ರಿಂದ 375ರೋಗಿಗಳು ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈಗ ವೈದ್ಯರು-ಸಿಬ್ಬಂದಿ ಕೊರತೆ ಕಾರಣ 100ರಿಂದ 130 ಜನ ಬಂದು ಹೋಗುತ್ತಿದ್ದಾರೆ.
ಡ್ರಾಯಿಂಗ್ ಆಫಿಸರ್ ಹುದ್ದೆ ಖಾಲಿ ಇದ್ದು ತಾತ್ಕಾಲಿಕವಾಗಿ ಸಮೀಪದ ಹಿರೇಮನ್ನಾಪೂರ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಆ ಸ್ಥಾನವನ್ನು ನಿರ್ವಹಿಸುತ್ತಿದ್ದಾರೆ. ತುರ್ತಾಗಿ ಸ್ತ್ರೀರೋಗ ತಜ್ಞ, ಹಿರಿಯ ವೈದ್ಯಾಧಿಕಾರಿ, ಅರಿವಳಿಕೆ ತಜ್ಞ ಹಾಗೂ ಚಿಕ್ಕಮಕ್ಕಳ ತಜ್ಞರ ವ್ಯವಸ್ಥೆ ಮಾಡಿದರೆ ಬಹಳ ಅನುಕೂಲವಾಗಲಿದೆ ಎಂಬುದು ರೋಗಿಗಳ ಅಂಬೋಣ.
"

ಮುಖ್ಯವಾಗಿ ನಮ್ಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅರಿವಳಿಕೆ ಸೇರಿದಂತೆ ತಜ್ಞ ವೈದ್ಯರು ಮತ್ತು ಆಂಬುಲೆನ್ಸ್‌ಗೆ ಇನ್ನೊಬ್ಬ ಚಾಲಕರ ಅವಶ್ಯಕತೆ ಇದೆ.

ವೈದ್ಯಾಧಿಕಾರಿ ಪೋಸ್ಟ್‌ಗೆ ಅರ್ಜಿಗಳೇ ಬಂದಿಲ್ಲ. ಬಂದರೆ ಅಂತವರಿಗೆ ಸಂದರ್ಶನ ಮಾಡದೇ ನೇರವಾಗಿ ಕೆಲಸಕ್ಕೆ ಹಾಜರಾಗಲು ಆರ್ಡರ್ ಕೊಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net