ವರ್ಷ ಮುಗಿದ ಮೇಲೆ ಶೂ-ಸಾಕ್ಸೃ್ ಭಾಗ್ಯ!

ವಾಟ್ಸಾೃಪ್ ಗ್ರೂಪ್‌ಗೆ ಮೇ 13ರಂದು ಶೂ-ಸಾಕ್ಸೃ್ ಹಂಚಲು ಹಾಕಲಾಗಿರುವ ಮೆಸೇಜ್.
ವಾಟ್ಸಾೃಪ್ ಗ್ರೂಪ್‌ಗೆ ಮೇ 13ರಂದು ಶೂ-ಸಾಕ್ಸೃ್ ಹಂಚಲು ಹಾಕಲಾಗಿರುವ ಮೆಸೇಜ್.
Published on

ಪ್ರಮುಖ ಮುಖ್ಯಾಂಶಗಳು

  • ಕೆಪಿಎಸ್ ಸ್ಕೂಲ್ ವಿರುದ್ಧ ಪಾಲಕರ ಆಕ್ರೋಶ
  • ವರ್ಷದ ಕೊನೆಯಲ್ಲಿ ವಿತರಣೆಗೆ ಪ್ರಹಸನ
ವಿಜಯವಾಣಿ ವಿಶೇಷ
ಕನಕಗಿರಿ: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲೆ ವಿಭಾಗದಲ್ಲಿ ಶೈಕ್ಷಣಿಕ ವರ್ಷ ಮುಗಿದ ವಿದ್ಯಾರ್ಥಿಗಳಿಗೆ ತಡವಾಗಿ ಶೂ-ಸಾಕ್ಸೃ್ ಹಂಚಿಕೆ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಶಿಕ್ಷಣ ಇಲಾಖೆಯು ಮಕ್ಕಳಿಗಾಗಿ ಜಾರಿಗೆ ತಂದಿರುವ ಈ ಯೋಜನೆಯಡಿ ಬಹುತೇಕ ಶಾಲೆಗಳ ಖಾತೆಗೆ ಫೆಬ್ರವರಿ ಅಂತ್ಯದೊಳಗೆ ಖರೀದಿ ಅನುದಾನ ಜಮೆ ಮಾಡಲಾಗಿದೆ. ಆದರೆ, ಕೆಲ ಶಾಲೆಗಳಿಗೆ ಪೂರ್ಣ ಪ್ರಮಾಣದ ಹಣ ಬಿಡುಗಡೆಯಾಗಿಲ್ಲ ಎನ್ನುವ ಮಾತಿದೆ.
ಪ್ರಸ್ತುತ ಕೆಪಿಎಸ್ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳಿಗೆ ಸರ್ಕಾರದಿಂದ ಮಂಜೂರಾಗಿದ್ದ ಈ ಸೌಲಭ್ಯ ಸಕಾಲದಲ್ಲಿ ದೊರೆತು ಯೋಜನೆ ಸದ್ಬಳಕೆಯಾಗಬೇಕಿತ್ತು. ಇಲಾಖೆಯು ಫೆಬ್ರವರಿಯಲ್ಲಿ ಶಾಲೆಯ ಖಾತೆಗೆ ಹಣ ವರ್ಗಾವಣೆ ಮಾಡಿದೆಯಾದರೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪೂರ್ಣ ಮೊತ್ತ ನೀಡಿಲ್ಲ. ಅತ್ತ ನಿಯಮಾನುಸಾರ ವಿತರಿಸುವ ಕೆಲಸವನ್ನು ಶಿಕ್ಷಕರೂ ಮಾಡಿಲ್ಲ. ಈಗ ಮುಂದಿನ ಸಾಲಿನ ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿರುವಾಗ ಹಂಚಿಕೆಗೆ ಮುಂದಾಗಿರುವುದು ವಿಪರ್ಯಾಸವಾಗಿದೆ.
ತಮ್ಮ ಮಕ್ಕಳಿಗೆ ಸೌಲಭ್ಯ ವಿತರಿಸದ ಕುರಿತು ಪಾಲಕರೊಬ್ಬರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಕರೆ ಮಾಡಿ ದೂರು ಸಲ್ಲಿಸಿದ್ದರು. ಆ ಬಳಿಕ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿತರಣೆಗೆ ಕ್ರಮ ವಹಿಸಿದ್ದಾರೆ ಎನ್ನಲಾಗಿದೆ. ಅದರಂತೆ, ಶಾಲೆಯ ಉಪ ಪ್ರಾಂಶುಪಾಲರು ಮೇ 13ರಂದು ವಾಟ್ಸಾೃಪ್ ಗ್ರೂಪ್‌ಗೆ ಸಂದೇಶ ಕಳುಹಿಸಿ ಅರ್ಹ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವುದಾಗಿ ತಿಳಿಸಿದ್ದಾರೆ.
ಈ ಪ್ರಕಟಣೆಯ ಬೆನ್ನಲ್ಲೇ ಸದ್ಯ ವಿತರಣಾ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಈಗಾಗಲೇ ಎಸ್‌ಎಸ್‌ಎಲ್‌ಸಿ ಪೂರೈಸಿ ಶಾಲೆಯಿಂದ ಹೊರಹೋಗುತ್ತಿರುವವರು ಇದನ್ನು ಪಡೆದುಕೊಂಡು ಏನು ಮಾಡಬೇಕೆಂಬುದು ಯಕ್ಷಪ್ರಶ್ನೆಯಾಗಿದೆ. ಉತ್ತೀರ್ಣಗೊಂಡ ವಿದ್ಯಾರ್ಥಿಗಳು ವರ್ಗಾವಣೆ ಪತ್ರ ಮತ್ತು ಅಂಕಪಟ್ಟಿ ಪಡೆಯಲು ಬಂದಾಗ ಇವುಗಳನ್ನು ತೆಗೆದುಕೊಂಡು ಹೋಗುತ್ತಿದ್ದರೆ, ಅನುತ್ತೀರ್ಣ ಗೊಂಡವರು ಪರೀಕ್ಷೆ ಅರ್ಜಿ ತುಂಬಲು ಬಂದಾಗ ಒಯ್ಯಬೇಕಾಗಿರುವುದು ಸೋಜಿಗದ ಸಂಗತಿಯಾಗಿದೆ.
"

ಶೂ-ಸಾಕ್ಸೃ್ ಖರೀದಿಗೆ 22 ಶಾಲೆಗಳಿಗೆ ಅನುದಾನ ಮಂಜೂರಾಗಿಲ್ಲ. ನಮ್ಮ ಶಾಲೆಗೆ ಅನುದಾನ ತಡವಾಗಿ ಬಂದಿದ್ದು, ಅದು ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ. ಬಂದ ಅನುದಾನ ಬೇರೆ ಹೆಸರಿನ ಹೆಡ್ ಆಫ್ ಅಕೌಂಟ್‌ನಿಂದ ಜಮೆಯಾಗಿತ್ತು. ಪರಿಶೀಲನೆ ಮಾಡಬೇಕೆನ್ನುವಷ್ಟರಲ್ಲಿ ಆರೋಗ್ಯ ಸಮಸ್ಯೆಯಿದ್ದರಿಂದ ರಜೆ ಮೇಲೆ ತೆರಳಿದ್ದೆ. ಕೆಲ ದಿನಗಳ ಹಿಂದೆ ಮಾಹಿತಿಗಾಗಿ ಬಿಇಒ ಅವರಿಗೆ ಪತ್ರ ಬರೆದು ಬಂದ ಅನುದಾನ ಯಾವುದೆಂದು ಖಚಿತಪಡಿಸಿಕೊಂಡ ಮೇಲೆ ಶೂ-ಸಾಕ್ಸೃ್ ಹಂಚಿಕೆ ಮಾಡಲಾಗುತ್ತಿದೆ.

— ಜಗದೀಶ ಹಾದಿಮನಿ ಉಪ ಪ್ರಾಂಶುಪಾಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net