ಗಂಗಾವತಿ; ನಗರ ವ್ಯಾಪ್ತಿಯಲ್ಲಿರುವ ನಿರಾಶ್ರಿತರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ತಾಲೂಕಾಡಳಿತ ಸರ್ಕಾರಿ ಜಾಗದ ಸರ್ವೇಯನ್ನು ಕೈಗೆತ್ತಿಕೊಂಡಿದ್ದು, ಆರಂಭಿಕ ಒಂದು ಸಾವಿರ ನಿರಾಶ್ರಿತರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಪ್ರತಿ ಕ್ಷೇತ್ರದಲ್ಲೂ 5 ಸಾವಿರ ಮನೆಗಳನ್ನು ವಿತರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು, ಸರ್ಕಾರಿ ಭೂಮಿ ಕಾಯ್ದಿರಿಸುವಂತೆ ಸುತ್ತೋಲೆ ಹೊರಡಿಸಿತ್ತು. ನಗರಸಭೆ ಮತ್ತು ಕಂದಾಯ ಅಧಿಕಾರಿಗಳ ತಂಡ ನಗರ ವ್ಯಾಪ್ತಿಯ ಸ.ನಂ.207, 53 ಮತ್ತು ವಿಪ್ರ ವ್ಯಾಪ್ತಿಯ ಸ.ನಂ.178ರ ಭೂಮಿಯಲ್ಲಿ ನಿವೇಶನ ರೂಪಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಜಂಟಿ ಸರ್ವೇ ಕೈಗೊಳ್ಳಲಾಗಿದೆ.