ಪಡಿತರ ವಿತರಣೆ ವೇಳೆ ಉಂಟಾಗುವ ಸರ್ವರ್ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿ ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ತಾಲೂಕು ಘಟಕ ಬುಧವಾರ ಗ್ರೇಡ್ 2 ತಹಸೀಲ್ದಾರ್ ರಜನಿಕಾಂತ್ ಕೆಂಗೇರಿಗೆ ಮನವಿ ಸಲ್ಲಿಸಿತು.
ತಾಲೂಕು ಅಧ್ಯಕ್ಷ ಸಂಗನಗೌಡ ಚಳಗೇರಿ ಮಾತನಾಡಿ, ಸರ್ಕಾರ ಬೆಳಗ್ಗೆ 10ರಿಂದ ಸಂಜೆ 6ಗಂಟೆವರೆಗೆ ಪಡಿತರ ವಿತರಸಬೇಕೆಂದು ಸೂಚನೆ ನೀಡಿದೆ. ಆದರೆ, ಸರ್ವರ್ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಪಡಿತರ ವಿತರಣೆ ವಿಳಂಬವಾಗುತ್ತಿದೆ. ಸರ್ವರ್ ಇಲ್ಲದೆ ಬೆಳಗ್ಗೆಯಿಂದ ಸಂಜೆಯವರೆಗೆ 15-20 ಕಾರ್ಡ್‌ದಾರರಿಗೆ ನೀಡಲು ಆಗುತ್ತಿಲ್ಲ.
ತಾಲೂಕಿನ ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳು 20ನೇ ತಾರೀಖಿನೊಳಗೆ ಪಡಿತರ ಧಾನ್ಯ ಸರಬರಾಜು ಮಾಡಬೇಕು. ಗೋದಾಮುಗಳಿಂದ ಅಂಗಡಿಗಳಿಗೆ ಪಡಿತರ ಪೂರೈಕೆಯಾದರೂ ಎರಡ್ಮೂರು ದಿನ ಬಿಲ್ ಆಗಿರುವುದಿಲ್ಲ. ಬೇಗ ಬಿಲ್ ಮಾಡಿ ಪಡಿತರದಾರರಿಗೆ ತ್ವರಿತವಾಗಿ ಮುಟ್ಟಿಸಲು ಅನಕೂಲ ಮಾಡಿಕೊಡಬೇಕು, ಹನಮನಾಳ ಹೋಬಳಿಯಲ್ಲಿರುವ 17 ಅಂಗಡಿಗಳಿಗೆ ಯಲಬುರ್ಗಾ ಆಹಾರ ಗೋದಾಮಿನಿಂದ ಪಡಿತರ ಸರಬರಾಜು ವಿಳಂಬವಾಗುತ್ತಿದ್ದು, ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.