ಕನ್ನಡ ಶಾಲೆಯ ವಜ್ರಮಹೋತ್ಸವ ಇಂದು

ಕುಕನೂರು ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹೊರ ನೋಟ.
ಕುಕನೂರು ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹೊರ ನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಇಟಗಿಯಲ್ಲಿ ಭರ್ಜರಿ ಸಿದ್ಧತೆ
  • ಹಳೇ ವಿದ್ಯಾರ್ಥಿಗಳ ಸಮಾಗಮ
ಕುಕನೂರು: ಖಾಸಗಿ ಶಾಲೆಗಳ ಭರಾಟೆಯು ಜೋರಾಗಿರುವ ಪ್ರಸ್ತುತ ಕಾಲಘಟದಲ್ಲಿ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು 75 ವರ್ಷ ಪೂರೈಸಿ ವಜ್ರ ಮಹೋತ್ಸವ ಆಚರಣೆಗೆ ಸಿದ್ಧವಾಗಿದೆ.
ದೇವಾಲಯಗಳ ಚಕ್ರವರ್ತಿ ಪ್ರಸಿದ್ಧಿಯ ಶ್ರೀ ಮಹೇಶ್ವರ ದೇವಸ್ಥಾನ ಇರುವ ತಾಲೂಕಿನ ಇಟಗಿ ಗ್ರಾಮವು ಐತಿಹಾಸಿಕ ತಾಣ. ಈ ಗ್ರಾಮದಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಜ್ರ ಮಹೋತ್ಸವ ಆಚರಿಸಲು ಹಲವು ತಿಂಗಳಿಂದ ಭರದ ತಯಾರಿ ನಡೆಸಿದ್ದು, ಡಿ.27, 28ಕ್ಕೆ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಶಾಲೆಯು 1950ರಲ್ಲಿ ಪ್ರಾರಂಭಗೊಂಡಿದ್ದು, ಸರ್ಕಾರದ ಕಟ್ಟಡವಿಲ್ಲದೆ ಗ್ರಾಮದ ಮಹೇಶ್ವರ, ಈಶ್ವರ, ದ್ಯಾವವ್ವ ದೇವಸ್ಥಾನಗಳು ಸೇರಿ ಹಲವೆಡೆ ತರಗತಿಗಳು ನಡೆದವು. ಪ್ರಾರಂಭದಲ್ಲಿ ನಿವೃತ್ತ ಪ್ರಾಚಾರ್ಯ ಶ್ರೀಧರ ದೀಕ್ಷಿತ್ ಧಾರವಾಡ ಶಾಲೆಯ ಪ್ರಗತಿಗಾಗಿ ಸಾಕಷ್ಟು ಶ್ರಮಿಸಿದರು. ಇದನ್ನು ಗಮನಿಸಿದ ಗ್ರಾಮದ ಹಿರಿಯ ವೆಂಕಟರಾವ್ ಕುಲಕರ್ಣಿ ಭೂಮಿ ದಾನ ಮಾಡುವ ಮೂಲಕ ಶಾಲೆಯ ಕಟ್ಟಡ ನಿರ್ಮಿಸಲು ಸಹಕರಿಸಿದರು.
ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಪೈಕಿ ಸುಭಾಷ್‌ಚಂದ್ರ ಪಾಟೀಲ್ ಹಾಗೂ ಈಶಣ್ಣ ಗುಳಗಣ್ಣನವರ ಯಲಬುರ್ಗಾ ಕ್ಷೇತ್ರದ ಶಾಸಕರಾಗಿದ್ದರು. ಇದರ ಜತೆಗೆ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಹಲವು ಉನ್ನತ ಹುದ್ದೆಗೇರಿದ್ದು, ಇಂದಿಗೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಳೆಯ ವಿದ್ಯಾರ್ಥಿಯಾಗಿದ್ದ ಶಾಸಕ ದಿ.ಈಶಣ್ಣ ಲಕ್ಕಪ್ಪ ಗುಳಗಣ್ಣನವರ ತಾವು ಕಲಿತ ಶಾಲೆಯ ಅಭಿವೃದ್ಧಿಪಡಿಸಲು 2009ರಲ್ಲಿ 50 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿ ಎರಡು ಮಹಡಿಯ ಒಂಬತ್ತು ಕೊಠಡಿಗಳನ್ನು ನಿರ್ಮಿಸುವ ಮೂಲಕ ಮಕ್ಕಳ ಕಲಿಕೆಗೆ ಅನುಕೂಲ ಕಲ್ಪಿಸಿದರು.
 ಕಲಿತ ಶಾಲೆಯ ವಜ್ರ ಮಹೋತ್ಸವಕ್ಕೆ ಈಶಣ್ಣ ಗುಳಗಣ್ಣನವರ ಪುತ್ರ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ, ಹಳೆಯ ವಿದ್ಯಾರ್ಥಿಗಳಾದ ಪ್ರಮೋದ ಜಕ್ಕಲಿ, ಶರಣಪ್ಪ ಕುಂಬಾರ, ಶಿವಕುಮಾರ ಹೊಸಮನಿ, ಪ್ರಮೋದ ಯಲ್ಲಪ್ಪಗೌಡರ, ಮಹಾಂತೇಶ ಕೌದಿ, ಮಂಜುನಾಥ ನೀಲಪ್ಪನವರ, ಖಾಸಿಂಸಾಬ್ ಪಿಂಜಾರ್, ಹಜರತ್ ಹುಸೇನ್‌ಮೌಲಾ, ಶಿವಣ್ಣ ಮುದ್ದಾಬಳ್ಳಿ ಸೇರಿ ಗ್ರಾಮದ ಹಿರಿಯರು, ಯುವಕರು ವಜ್ರ ಮಹೋತ್ಸವ ಆಚರಣೆಗೆ ಮುಂದಾಗಿದ್ದಾರೆ. ಇನ್ನು ರಾಜ್ಯದ ಹಲವು ಕಡೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಳೇ ವಿದ್ಯಾರ್ಥಿಗಳು ಗ್ರಾಮಕ್ಕೆ ಆಗಮಿಸಿದ್ದು, ಗ್ರಾಮದ ಸರ್ಕಾರಿ ಶಾಲೆಯ ವಜ್ರ ಮಹೋತ್ಸವವನ್ನು ಜಾತ್ರೆಯಂತೆ ಆಚರಿಸಲು ಸಜ್ಜಾಗಿದ್ದಾರೆ.
ಖಾಸಗಿ ಶಾಲೆಗಳ ಭರಾಟೆಯಲ್ಲಿ ಈ ಕನ್ನಡ ಶಾಲೆಯು ಉಳಿದು, ಬೆಳೆಯಬೇಕಾದರೆ ಗ್ರಾಮದ ಹಿರಿಯರ ಮಾರ್ಗದರ್ಶನ, ಯುವಕರು ಹಾಗೂ ಹಳೆಯ ವಿದ್ಯಾರ್ಥಿಗಳ ಕಾಳಜಿಯೂ ಮುಖ್ಯವಾಗಿದ್ದು, ಈ ಕಾರ್ಯವು ಇತರ ಗ್ರಾಮಗಳಿಗೂ ಮಾದರಿಯಾಗಿದೆ. 
"

ನಮ್ಮ ತಂದೆ ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆ ತಾವು ಕಲಿತ ಶಾಲೆಯ ಅಭಿವೃದ್ಧಿಗೆ ಅನುದಾನ ನೀಡಿ, ಕಟ್ಟಡ ನಿರ್ಮಾಣಕ್ಕೆ ಮುತುವರ್ಜಿವಹಿಸಿದರು. ಸಾವಿರಾರೂ ವಿದ್ಯಾರ್ಥಿಗಳು ಇದೇ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆ ಪಡೆದಿದ್ದಾರೆ.

"ನಮ್ಮ ಬಾಲ್ಯದಲ್ಲಿ ಖಾಸಗಿ ಶಾಲೆಯಲ್ಲಿ ಓದುವ ಶಕ್ತಿ ನಮಗಿರಲಿಲ್ಲ. ಕಡು ಬಡತನದಲ್ಲಿಯೂ ಕನ್ನಡ ಶಾಲೆಯಲ್ಲಿ ಓದಿ ದೇಶ ಕಾಯುವ ಸೈನಿಕನಾದೆ. ಇದು ನನಗೆ ಹೆಮ್ಮೆಯ ವಿಷಯ. ನಮ್ಮೂರ ಕನ್ನಡ ಶಾಲೆ ಬೆಳೆಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net