ರೈತರಿಂದ ರಸ್ತೆ ದುರಸ್ತಿ ಕಾರ್ಯ

ಅಳವಂಡಿ ಸಮೀಪದ ಕಂಪ್ಲಿ, ಮೋರನಾಳ ಸೀಮಾದ ರಸ್ತೆಯಲ್ಲಿ ಮುಳ್ಳು ಕಂಟಿ ತೆರವುಗೊಳಿಸುತ್ತಿರುವುದು.
ಅಳವಂಡಿ ಸಮೀಪದ ಕಂಪ್ಲಿ, ಮೋರನಾಳ ಸೀಮಾದ ರಸ್ತೆಯಲ್ಲಿ ಮುಳ್ಳು ಕಂಟಿ ತೆರವುಗೊಳಿಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬೃಹತ್ ಗಾತ್ರದ ಮುಳ್ಳು ಕಂಟಿಗಳ ತೆರವು
  • ಅಧಿಕಾರಿಗಳ ನಿರ್ಲಕ್ಷೃ
ಅಳವಂಡಿ: ಸಮೀಪದ ಕಂಪ್ಲಿ, ಮೋರನಾಳ ರಸ್ತೆ ದುರಸ್ತಿಗೊಳಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರು ಸ್ಪಂದಿಸದ ಕಾರಣ ರೈತರೇ ರಸ್ತೆ ದುರಸ್ತಿಗೊಳಿಸಿದ್ದಾರೆ.
ಈ ರಸ್ತೆ ಮಾರ್ಗದಲ್ಲಿ ಕಂಪ್ಲಿ, ಮೋರನಾಳ, ಬೈರಾಪುರ ಭಾಗದ ರೈತರ ಸಾವಿರಾರು ಎಕರೆ ಕೃಷಿ ಭೂಮಿ ಇದೆ. ಜಮೀನಿನ ಕೃಷಿ ಚಟುವಟಿಕೆಗೆ, ಬೀಜ, ಗೊಬ್ಬರ ಹಾಗೂ ಫಸಲು ಸಾಗಿಸಲು ಸಂಪರ್ಕ ರಸ್ತೆಯಾಗಿದೆ. ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ರೈತರು ಸ್ವತಃ ಹಣದಿಂದ ರಸ್ತೆ ದುರಸ್ತಿ ಮಾಡಿ ಸರ್ಕಾರದ ಕಣ್ಣು ತೆರೆಸಿದ್ದಾರೆ.
ಕಂಪ್ಲಿ-ಮೋರನಾಳ ಸೀಮಾ ರಸ್ತೆ ಇಕ್ಕೆಲಗಳಲ್ಲಿ ಬೃಹತ್ ಗಾತ್ರದ ಮುಳ್ಳು ಕಂಟಿಗಳು ಬೆಳೆದು ನಿಂತಿದ್ದವು. ಈ ಮಾರ್ಗದಲ್ಲಿ ಸಂಚರಿಸುವುದು ದುಸ್ತರವಾಗಿತ್ತು. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
1 ಲಕ್ಷಕ್ಕೂ ಹೆಚ್ಚು ವೆಚ್ಚ: ಕಂಪ್ಲಿ, ಮೋರನಾಳ ಭಾಗದ ರೈತರು 1ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಿ ರಸ್ತೆಯಲ್ಲಿದ್ದ ಮುಳ್ಳು ಕಂಟಿಗಳನ್ನು ತೆರವುಗೊಳಿಸಿ, ರಸ್ತೆ ಗುಂಡಿಗಳಿಗೆ ಮಣ್ಣು-ಮುರಂ ಹಾಕಿ ಸಂಚಾರಕ್ಕೆ ಯೋಗ್ಯವಾಗುವಂತೆ 1 ಕಿ.ಮೀ ರಸ್ತೆಯನ್ನು ದುರಸ್ತಿಗೊಳಿಸಿದ್ದಾರೆ.
ಸರ್ಕಾರ ಕೂಡಲೇ ರಸ್ತೆಯ ಶಾಶ್ವತ ದುರಸ್ತಿ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ರೈತರಾದ ಜಗದೀಶ ಸಾಲಮನಿ, ಯಲ್ಲಪ್ಪ ಆಡಿನ, ಹನುಮಂತರಡ್ಡಿ, ಅಂದಪ್ಪ ಶೆಟ್ಟರ, ಪರಸುರಾಮ, ಮಂಜುನಾಥ ಸ್ವಾಮಿ, ಭೂತಪ್ಪ ವಾಲಿಕಾರ, ಫಕ್ಕೀರೇಶ ಹಮ್ಮಿಗಿ, ವಿರುಪಣ್ಣ ಹುಲ್ಲೂರು, ಶರಣು ಆಲೂರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net