ಮಕ್ಕಳ ಶಿಕ್ಷಣಕ್ಕಾಗಿ ರಸ್ತೆ ನಿರ್ಮಾಣ

ಗವಿಮಠದ ಕೈಲಾಸ ಮಂಟಪದಲ್ಲಿ ಜಲಂಧರ್​ ನಾಯಕ್​ ಅವರಿಗೆ ಶೇಕುಣಸಿ ವಿರಕ್ತ ಮಠದ ಮಹಾಂತಪ್ರಭು ಮಹಾಸ್ವಾಮಿ ಸನ್ಮಾನಿಸಿದರು.
ಗವಿಮಠದ ಕೈಲಾಸ ಮಂಟಪದಲ್ಲಿ ಜಲಂಧರ್​ ನಾಯಕ್​ ಅವರಿಗೆ ಶೇಕುಣಸಿ ವಿರಕ್ತ ಮಠದ ಮಹಾಂತಪ್ರಭು ಮಹಾಸ್ವಾಮಿ ಸನ್ಮಾನಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಒಡಿಶಾದ ಜಲಂಧರ್​ ನಾಯಕ್​
  • ಸಾಧನೆಗೆ ಗವಿಶ್ರಿ ಸನ್ಮಾನ
ವಿಜಯವಾಣಿ ವಿಶೇಷ ಕೊಪ್ಪಳ
ತನ್ನ ಹೆಂಡತಿ ಸಾವಿನಿಂದ ವಿಚಲಿತನಾದ ಬಿಹಾರದ ದಶರಥ ಮಾಂಜಿ ಬೆಟ್ಟ ಕಡಿದು ರಸ್ತೆ ಮಾಡುವ ಮೂಲಕ ಅಮರನಾಗಿದ್ದಾನೆ. ಅದರಂತೆ ಮಕ್ಕಳ ಶಿಕ್ಷಣಕ್ಕಾಗಿ ಗುಡ್ಡಗಾಡಿನಲ್ಲಿ 8 ಕಿ.ಮೀ. ರಸ್ತೆ ನಿರ್ಮಿಸುವ ಮೂಲಕ ಒಡಿಶಾದ ಬುಡಕಟ್ಟು ಸಮುದಾಯದ ಜಲಂಧರ್​ ನಾಯಕ್​ ಸಾಧನೆ ಮೆರೆದಿದ್ದಾನೆ. ಅವರ ಸಾಧನೆ ಗುರುತಿಸಿದ ಗವಿಶ್ರೀಗಳು ಜಾತ್ರೆಗೆ ಆಹ್ವಾನಿಸಿ ಸನ್ಮಾನಿಸಿದ್ದಾರೆ.
ಯಾವುದೇ ಆಧುನಿಕ ಜಗತ್ತಿನ ಪರಿಚಯವಿಲ್ಲದ ಒಡಿಶಾ ರಾಜ್ಯದ ಕಂದಮಾಲ್​ ಜಿಲ್ಲೆಯ, ತುಡಿಪಾಜು ಗ್ರಾಪಂ ವ್ಯಾಪ್ತಿಯ ಗುಮ್ಮಿ ಎಂಬ ಗ್ರಾಮದಲ್ಲಿ ಜಲಂಧರ ಕುಟುಂಬ ವಾಸವಿದೆ. ದಟ್ಟ ಅರಣ್ಯ ಪ್ರದೇಶವಾಗಿದ್ದು, ಪಟ್ಟಣದಿಂದ 15 ಕಿ.ಮೀ.ದೂರದಲ್ಲಿದೆ. ರಸ್ತೆ, ವಿದ್ಯುತ್​, ಶಾಲೆ, ಆಸ್ಪತ್ರೆ ಸೇರಿ ಯಾವುದೇ ಸೌಲಭ್ಯಗಳಿಲ್ಲ. ಆರಂಭದಲ್ಲಿ ನಾಲ್ಕು ಕುಟುಂಬಗಳು ವಾಸವಿದ್ದವು. ಶಾಲೆಗೆ ತೆರಳಬೇಕೆಂದರೆ ನಿತ್ಯ ಐದು ಕಿ.ಮೀ. ಕಲ್ಲು&ಮಣ್ಣಿನ ಬೆಟ್ಟದಲ್ಲೇ ನಡೆದು ಹೋಗಿ&ಬರಬೇಕಾದ ಸ್ಥಿತಿ ಇದೆ. ಆಳುವ ಸರ್ಕಾರ, ಜಿಲ್ಲಾಡಳಿತ ಸೌಲಭ್ಯ ಕಲ್ಪಿಸುವ ಗೋಜಿಗೆ ಹೋಗಿರಲಿಲ್ಲ. ಹೀಗಾಗಿ ಜತೆಗಿದ್ದ ನಾಲ್ಕು ಕುಟುಂಬಗಳು ಹಳ್ಳಿ ತೊರೆದು 15 ಕಿ.ಮೀ. ದೂರದ ಪಟ್ಟಣಕ್ಕೆ ವಲಸೆ ಹೋಗಿದ್ದಾರೆ.
ಆದರೆ, ಪತ್ನಿ ಗರ್ಭಿಣಿ ಇದ್ದ ಕಾರಣ ಗ್ರಾಮ ತೊರೆಯದ ಸ್ಥಿತಿಯಲ್ಲಿದ್ದ ಜಲಂಧರ್​ ಮಕ್ಕಳ ಶಿಕ್ಷಣಕ್ಕಾಗಿ ತಾವೇ ರಸ್ತೆ ನಿರ್ಮಿಸಿದ್ದಾರೆ. ನಿತ್ಯ ಹಾರೆ, ಗುದ್ದಲಿ, ಸಲಿಕೆ ಹಿಡಿದು ರಸ್ತೆ ನಿರ್ಮಿಸಿದ್ದಾರೆ. ಗುಮ್ಮಿ ಗ್ರಾಮದಿಂದ ಸುಡ್ರುಬಾಲಿ ಗ್ರಾಮದವರಗೆ 5 ಕಿ.ಮೀ. ರಸ್ತೆ ನಿರ್ಮಾಣಗೊಂಡಿದೆ. ಇದರಿಂದ ನಿತ್ಯ ಶಾಲೆಗೆ ಹೋಗಿ ಬರಲು ಅನುಕೂಲವಾಗಿದೆ. ಜಲಂಧರ್​ ಅವರಿಗೆ ಮೂವರು ಮಕ್ಕಳಿದ್ದಾರೆ. ಹಿರಿಯವನು ಪದವಿ ದ್ವೀತಿಯ ವರ್ಷ, ಎರಡನೇ ಮಗ ದ್ವೀತಿಯ ಪಿಯುಸಿ ಹಾಗೂ ಮೂರನೇ ಮಗ ಎಸ್ಸೆಸ್ಸೆಲ್ಸಿಯಲ್ಲಿ ಅಭ್ಯಾಸ ಮಾಡುತ್ತಿದ್ದಾನೆ.
ತಾವು ಅನಕ್ಷರಸ್ಥರಾಗಿದ್ದರೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಕನಸು ಹೊತ್ತಿರುವ ಜಲಂಧರ್​ ಈಗಲೂ ತಮ್ಮೂರಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ, ದಟ್ಟ ಅರಣ್ಯವಾದ ಕಾರಣ ವಿವಿಧ ಕಾನೂನು ನೆಪ ಹೇಳುವ ಅಧಿಕಾರಿಗಳು ಕಲ್ಪಿಸುವ ಮನಸ್ಸು ಮಾಡಿಲ್ಲ. ಆದರೂ, ಪೂರ್ವಜರು ಹುಟ್ಟಿ, ಬೆಳೆದ ಊರು ತೊರೆವ ಮನಸ್ಸಿಲ್ಲದ ಜಲಂಧರ್​ ಕುಟುಂಬ ಅಲ್ಲಿಯೇ ವಾಸವಿದೆ. ಪುಟ್ಟ ಮನೆಯಿದ್ದು ಸೋಲಾರ್​ ದೀಪ ಅಳವಡಿಸಿಕೊಂಡಿದ್ದಾರೆ. ಮನೆಗೆ ಬಾಗಿಲೂ ಸಹ ಇಲ್ಲ ಎನ್ನುತ್ತಾರೆ ಜಲಂಧರ್​ ನಾಯಕ್​.

ಮಕ್ಕಳು ಆಸ್ತಿಯಲ್ಲಿ ಪಾಲು ಕೇಳುತ್ತಾರೆಂದು ದೂರುವ ಪಾಲಕರ ನಡುವೆ ಜಲಂಧರ್​ ನಾಯಕ್​ ಗ್ರಾಮದ ಮಕ್ಕಳ ಶಿಕ್ಷಣಕ್ಕಾಗಿ 8 ಕಿ.ಮೀ. ರಸ್ತೆ ನಿರ್ಮಿಸಿದ್ದಾರೆ. ಅನಕ್ಷರಸ್ಥರಾದರೂ ತಮ್ಮ ಮಕ್ಕಳು ಶಿಕ್ಷಣ ಪಡೆಯಲಿ ಎಂದು ರಸ್ತೆ ನಿರ್ಮಿಸುವ ಮೂಲಕ ಮಾದರಿಯಾಗಿದ್ದಾರೆ. ಇಂಥವರು ನಮಗೆಲ್ಲ ಪ್ರೇರಣೆ ಆಗಬೇಕು.

ನಾವು ಅರಣ್ಯವಾಸಿಗಳು. ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ. ಅದಕ್ಕೆ ಜತೆಗಿದ್ದ ನಾಲ್ಕು ಕುಟುಂಬ ಗ್ರಾಮ ತೊರೆದಿವೆ. ಅರಣ್ಯದಲ್ಲಿ 8 ಕಿ.ಮೀ. ರಸ್ತೆ ನಿರ್ಮಿಸಿರುವೆ. ಇದರಿಂದ ಶಾಲೆಗೆ ಹೋಗಿ ಬರಲು ಮಕ್ಕಳಿಗೆ ಅನುಕೂಲವಾಗಿದೆ. ಗವಿಮಠಕ್ಕೆ ಬಂದು ಶ್ರೀಗಳು ಹಾಗೂ ಜನರನ್ನು ನೋಡಿದ್ದು ಖುಷಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net