ಭಾರಿ ಮಳೆಗೆ ಭತ್ತದ ಬೆಳೆ ಹಾನಿ

ಸಿದ್ದಾಪುರ ಹೊರ ವಲಯದಲ್ಲಿ ಮಳೆ ಹೊಡೆತಕ್ಕೆ ಭತ್ತದ ಗದ್ದೆ ನೆಲಕಚ್ಚಿರುವುದು.
ಸಿದ್ದಾಪುರ ಹೊರ ವಲಯದಲ್ಲಿ ಮಳೆ ಹೊಡೆತಕ್ಕೆ ಭತ್ತದ ಗದ್ದೆ ನೆಲಕಚ್ಚಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ
  • ಸಿದ್ದಾಪುರ ರೈತರಿಗೆ ಎದುರಾದ ಸಂಕಟ
ಸಿದ್ದಾಪುರ: ಇತ್ತೀಚೆಗೆ ಸುರಿದ ಭಾರಿ ಮಳೆ ಹೊಡೆತಕ್ಕೆ ಅಪಾರ ಪ್ರಮಾಣದ ಭತ ್ತಬೆಳೆಗೆ ಹಾನಿಯಾಗಿದ್ದು, ಬೆಳೆಗಾರರಿಗೆ ಸಂಕಟ ಎದುರಾಗಿದೆ.
ತುಂಗಭದ್ರಾ ಜಲಾಶಯಗಳ ಗೇಟ್ ಅಳವಡಿಕೆ ಕಾರಣ ಎರಡನೇ ಬೆಳೆಗೆ ನೀರು ಬಿಡಲು ಸಾಧ್ಯವಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಹೀಗಾಗಿ ಇದ್ದ ಒಂದು ಬೆಳೆಯನ್ನಾದರೂ ಉಳಿಸಿಕೊಳ್ಳಬೇಕು ಎಂದು ರೈತರು ಹರಸಾಹಸ ಪಟ್ಟರೂ ಸತತ ಮಳೆಯಿಂದಾಗಿ ಸಂಕಷ್ಟ ಹೆಚ್ಚಾಗಿದೆ.
ಭಾರಿ ಮಳೆ-ಗಾಳಿ ಹೊಡೆತಕ್ಕೆ ಸಿದ್ದಾಪುರ ಹೋಬಳಿಯ ಜಮಾಪುರ, ಈಳಿಗನೂರು, ಉಳೇನೂರು, ಕೊಟ್ನೇಕಲ್, ಸಿದ್ದಾಪುರ, ಗುಂಡೂರು, ಮುಸ್ಟೂರು ಸೇರಿ ಎಲ್ಲೆಡೆ ಗದ್ದೆಗಳು ಹಾನಿಯಾಗಿವೆ. ಬೆಳೆ ನಿರ್ವಹಣೆಗೆ ಸಾವಿರಾರು ರೂಪಾಯಿ ವ್ಯಯಿಸಲಾಗಿದೆ. ಕೆಲ ದಿನಗಳಲ್ಲಿ ಕಟಾವು ಮಾಡಬೇಕು ಎನ್ನುವಷ್ಟರಲ್ಲೇ ಮಳೆರಾಯನ ಅಬ್ಬರಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ನೆಲಕ್ಕುರುಳಿರುವ ಭತ್ತದ ತೆನೆಗಳನ್ನು ಕಟ್ಟಲು ಹೆಚ್ಚಿನ ಕಾರ್ಮಿಕರ ಬಳಕೆ ಮಾಡಬೇಕಿದೆ. ಈಗಾಗಲೇ ವ್ಯಯಿಸಿರುವ ಖರ್ಚುಗಳ ಜತೆ ಈಗ ಕಾರ್ಮಿಕರಿಗೆ ಹಣ ವ್ಯಯಿಸಬೇಕಿದೆ.
ಮಳೆ ಹೊಡೆತದಿಂದಾಗಿ ಸಿದ್ದಾಪುರ ಹೋಬಳಿಯಲ್ಲಿ 1289 ಹೆಕ್ಟೇರ್ ಬೆಳೆ ಹಾನಿಗೊಳಗಾಗಿದೆ. ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ, ತಾಲೂಕಾಡಳಿತಕ್ಕೆ ಹಾನಿ ವರದಿ ಸಲ್ಲಿಸಿದ್ದಾರೆ. ಶೀಘ್ರವೇ ಸರ್ಕಾರದಿಂದ ಅನ್ನದಾತರಿಗೆ ಬೆಳೆ ಹಾನಿ ಪರಿಹಾರ ದೊರೆತರೆ ರೈತಾಪಿ ವರ್ಗಕ್ಕೆ ಕೊಂಚ ಅನುಕೂಲವಾಗಲಿದೆ. ಮುಂಚೂಣಿಯಲ್ಲಿ ನಾಟಿ ಮಾಡಿರುವ ಭತ್ತ ಕಟಾವು ಮಾಡಿದರೆ ಇಳುವರಿ ಸಮಸ್ಯೆ ರೈತರನ್ನು ಕಾಡುತ್ತಿದೆ. ಮಳೆಯಿಂದಾಗಿ ಬೆಳೆಗೆ ಹಾನಿಯಾಗಿದ್ದು, ಇಳುವರಿ ಕುಂಠಿತವಾಗಿದೆ.
ಜಮಾಪುರದಲ್ಲಿ ಬಿಪಿ2 (ಸೆಕೆಂಡ್ ಸೋನಾ) ಹಾಗೂ ಜನನಿ ಭತ್ತದ ಬೀಜವನ್ನು 40 ರೈತರು ನಾಟಿ ಮಾಡಿದ್ದು, ಇಳುವರಿ ಕುಂಠಿತವಾಗಿದೆ ಎಂದು ರೈತ ಸಂಪರ್ಕ ಕೇಂದ್ರಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ. ಮತ್ತೆ ಹೋಬಳಿಯ ಕೆಲವೆಡೆ ಭತ್ತ ನಾಟಿ ಮಾಡಿದ ಮೇಲೆ ಬೆಳೆ ತೆನೆಯೇ ಬಿಚ್ಚಿಲ್ಲ ಎಂದು ರೈತರು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಸಿದ್ದಾಪುರ ಹೋಬಳಿ ವ್ಯಾಪ್ತಿಯಲ್ಲಿ 1289 ಹೆಕ್ಟೇರ್ ಭತ್ತದ ಬೆಳೆ ಹಾನಿಗೊಳಗಾಗಿದೆ. ಜಮಾಪುರದಲ್ಲಿ ಬಿಪಿ2 ಹಾಗೂ ಜನನಿ ಭತ್ತದ ಬೀಜ ನಾಟಿ ಮಾಡಿದ್ದು, ಇಳುವರಿ ಕುಂಠಿತವಾಗಿದೆ ಎಂದು ರೈತರು ದೂರು ಸಲ್ಲಿಸಿದ್ದಾರೆ. ಪರಿಶೀಲನೆ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net