ಪಬ್ಲಿಕ್ ಕ್ಲಬ್ ಆಸ್ತಿ ನಗರಸಭೆ ವಶಕ್ಕೆ

ಗಂಗಾವತಿ ಪಬ್ಲಿಕ್ ಕ್ಲಬ್‌ಗೆ ಸಂಬಂಧಿಸಿದ ಆಸ್ತಿಯನ್ನು ನಗರಸಭೆ ಅಧಿಕಾರಿಗಳು ಬುಧವಾರ ವಶಕ್ಕೆ ತೆಗೆದುಕೊಂಡು ಬೀಗ ಹಾಕಿದರು. ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ಪರಿಸರ ಇಂಜಿನಿಯರ್ ಶರಣಪ್ಪ , ಆರೋಗ್ಯ ನಿರೀಕ್ಷಕ ಎ.ನಾಗರಾಜ, ವ್ಯವಸ್ಥಾಪಕ ಷಣ್ಮುಖಪ್ಪ, ಕಂದಾಯ ನಿರೀಕ್ಷಕ ಮಹೇಶ ದಲಾಲ್ ಇತರರಿದ್ದರು.
ಗಂಗಾವತಿ ಪಬ್ಲಿಕ್ ಕ್ಲಬ್‌ಗೆ ಸಂಬಂಧಿಸಿದ ಆಸ್ತಿಯನ್ನು ನಗರಸಭೆ ಅಧಿಕಾರಿಗಳು ಬುಧವಾರ ವಶಕ್ಕೆ ತೆಗೆದುಕೊಂಡು ಬೀಗ ಹಾಕಿದರು. ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ಪರಿಸರ ಇಂಜಿನಿಯರ್ ಶರಣಪ್ಪ , ಆರೋಗ್ಯ ನಿರೀಕ್ಷಕ ಎ.ನಾಗರಾಜ, ವ್ಯವಸ್ಥಾಪಕ ಷಣ್ಮುಖಪ್ಪ, ಕಂದಾಯ ನಿರೀಕ್ಷಕ ಮಹೇಶ ದಲಾಲ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕ್ರಮ
  • ಆದೇಶ
  • ವಾಣಿಜ್ಯ
ಗಂಗಾವತಿ:

ಆಸ್ತಿ ಮಾಲೀಕತ್ವದ ಪೂರಕ ದಾಖಲೆಗಳಿಲ್ಲದ ನಗರದ ಹೃದಯ ಭಾಗದಲ್ಲಿರುವ ಪಬ್ಲಿಕ್ ಕ್ಲಬ್ ಆಸ್ತಿಯನ್ನು ನಗರಸಭೆ ಬುಧವಾರ ವಶಕ್ಕೆ ಪಡೆದು ಬೀಗ ಹಾಕಿದೆ.

ಸ.ನಂ.198/2 ಸಂಬಂಧಿಸಿದ 1.20 ಎಕರೆ ಪ್ರದೇಶದಲ್ಲಿ 60ವರ್ಷಗಳ ಹಿಂದೆ ಪಬ್ಲಿಕ್ ಕ್ಲಬ್ ಅಸ್ತಿತ್ವಕ್ಕೆ ತಂದಿದ್ದು, ಕಟ್ಟಡಗಳನ್ನು ನಿರ್ಮಿಸಲಾಗಿದೆ. ಮೂಲ ದಾಖಲೆಗಳಿಲ್ಲದೆ, ನಗರಸಭೆಯಲ್ಲಿ ಅಸ್ತಿ ಸಂಖ್ಯೆ ಪಡೆದುಕೊಂಡಿದ್ದು, ಸರ್ಕಾರಿ ಆಸ್ತಿ ಒತ್ತುವರಿ ಕುರಿತು ದೂರುಗಳು ಬಂದಿದ್ದವು. ಹೀಗಾಗಿ ಮಾಲೀಕತ್ವದ ದಾಖಲೆಗಳನ್ನು ಸಲ್ಲಿಸುವಂತೆ 2025ರ ನವೆಂಬರ್‌ನಲ್ಲಿ ಪಬ್ಲಿಕ್ ಕ್ಲಬ್‌ಗೆ ನೋಟಿಸ್ ನೀಡಲಾಗಿತ್ತು.
ನಗರಸಭೆ ಪೌರಾಯುಕ್ತ ಮತ್ತು ವಕೀಲ ಯು.ಆರ್. ವಿವೇಕಾನಂದ ಕಲಬುರಗಿ ಅವರು ಪ್ರಾದೇಶಿಕ ಆಯುಕ್ತರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್, ಎದುರುದಾರರಾದ ಕ್ಲಬ್ ಅಧ್ಯಕ್ಷ ಮಹಾಬಳೇಶ್ವರ ಹಾಸಿನಾಳ್‌ಗೆ ದಾಖಲೆ ಸಲ್ಲಿಸಲು ಸೂಚಿಸಿದ್ದರು. ಆದರೆ, ಸಕಾಲಕ್ಕೆ ಸೂಕ್ತ ದಾಖಲೆ ಸಲ್ಲಿಸದಿದ್ದರಿಂದ ಕ್ಲಬ್ ಆಸ್ತಿಯನ್ನು ನಗರಸಭೆ ಸುಪರ್ದಿಗೆ ಪಡೆಯುವಂತೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಯು.ವಸಂತಕುಮಾರಿ ಮತ್ತು ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ನೇತೃತ್ವದ ಅಧಿಕಾರಿಗಳ ತಂಡ ಆದೇಶ ಪತ್ರವನ್ನು ಕ್ಲಬ್ ಕಾರ್ಯದರ್ಶಿ ಡಾ.ಶಿವಕುಮಾರ ಮಾಲಿಪಾಟೀಲ್‌ಗೆ ನೀಡಿ, ಕ್ಲಬ್‌ಗೆ ಬೀಗ ಹಾಕಿದರು. ಮಕ್ಕಳ ಹಿತದೃಷ್ಟಿಯಿಂದ ಕ್ಲಬ್ ಆವರಣದಲ್ಲಿರುವ ಕನ್ನಡ ಮಾಧ್ಯಮ ಶಾಲೆಗೆ ವಿನಾಯಿತಿ ನೀಡಲಾಗಿದೆ.
ಪೌರಾಯುಕ್ತ ವಿರೂಪಾಕ್ಷಮೂರ್ತಿ ಮಾತನಾಡಿ, ಪಬ್ಲಿಕ್ ಕ್ಲಬ್‌ಗೆ ಸಂಬಂಧಿಸಿದ ಯಾವುದೇ ದಾಖಲೆಗಳಿಲ್ಲ. ಹೀಗಾಗಿ ವಶಕ್ಕೆ ಪ್ರಾದೇಶಿಕ ಆಯುಕ್ತರ ಆದೇಶದ ಮೇರೆಗೆ ಕ್ಲಬ್ ಆಸ್ತಿ ವಶಕ್ಕೆ ಪಡೆಯಲಾಗಿದೆ. ಕ್ಲಬ್ ಮುಂಭಾಗದಲ್ಲಿರುವ ವಾಣಿಜ್ಯ ಮಳಿಗೆಗಳ ತೆರವಿಗೂ ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದು, ಜಿಲ್ಲಾಡಳಿತದ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವ್ಯಾಪಾರಿಗಳಿಂದ ಕೋರ್ಟ್ ಮೊರೆ ?

ಕ್ಲಬ್ ಆವರಣದಲ್ಲಿದ್ದ ರಿಕ್ರಿಯೇಷನ್ ಕ್ಲಬ್ ಕಟ್ಟಡ, ಭಾರತಿ ವಾಣಿಜ್ಯ ವಿದ್ಯಾಸಂಸ್ಥೆ, ಶ್ರೀ ಗುರು ಪುಟ್ಟರಾಜ ಸಂಗೀತ ವಿದ್ಯಾಲಯ, ಶಟಲ್ ಬ್ಯಾಡ್ಮಿಂಟನ್ ಕೋರ್ಟ್, ಟೇಬಲ್ ಟೆನ್ನಿಸ್, ವಾಲಿಬಾಲ್, ಕೇರಂ, ಚೆಸ್ ಹಾಲ್, ಕಲಾಭವನ, ಹಿರಿಯ ನಾಗರಿಕರ ಗ್ರಂಥಾಲಯ ಮತ್ತು ವಿಶ್ರಾಂತಿ ಕೊಠಡಿಗೆ ಬೀಗ ಹಾಕಲಾಗಿದೆ. ಕ್ಲಬ್ ಮುಂದಿರುವ 15ಕ್ಕೂ ಹೆಚ್ಚು ಮಳಿಗೆಗಳ ತೆರವಿಗೆ ನೋಟಿಸ್ ನೀಡಿದ್ದು, ವ್ಯಾಪಾರಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ವ್ಯಾಪಾರಿಗಳು ಕ್ಲಬ್‌ಗೆ ಮುಂಗಡ ಹಣ ನೀಡಿ ಸ್ವಂತ ಹಣದಲ್ಲಿ ಕಟ್ಟಡ ನಿರ್ಮಿಸಿಕೊಂಡಿದ್ದರು. ಈಗ ಖಾಲಿ ಮಾಡಲು ನಗರಸಭೆ ನೋಟಿಸ್ ನೀಡಿದ್ದರಿಂದ ಕಂಗಾಲಾಗಿದ್ದು, ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.
"

ಪಬ್ಲಿಕ್ ಕ್ಲಬ್ ಪೂರಕ ದಾಖಲೆಗಳಿಲ್ಲದೆ ಸರ್ಕಾರಿ ಆಸ್ತಿ ಅತಿಕ್ರಮಿಸಿಕೊಂಡಿರುವ ಬಗ್ಗೆ ಸಾಬೀತಾಗಿದೆ. ಹೀಗಾಗಿ ಪ್ರಾದೇಶಿಕ ಆಯುಕ್ತರ ನ್ಯಾಯಾಲಯದ ಆದೇಶದ ಮೇರೆಗೆ ಪಬ್ಲಿಕ್ ಕ್ಲಬ್ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ.

— ಯು.ವಸಂತಕುಮಾರಿ ತಹಸೀಲ್ದಾರ್, ಗಂಗಾವತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net