ಕಾರಟಗಿಯಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸರ್ಕಾರಿ ಜಾಗ ನೀಡುವಂತೆ ಒತ್ತಾಯಿಸಿ ಸಂಘದ ಪದಾಧಿಕಾರಿಗಳು ಗ್ರೇಡ್-2 ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ,ಉಪಾಧ್ಯಕ್ಷ ಗುರುಪ್ರಸಾದ, ಕಾರ್ಯದರ್ಶಿ ವೆಂಕೋಬ ಛಲವಾದಿ, ರಾಜ್ಯಪರಿಷತ್ ಸದಸ್ಯ ಮಂಜುನಾಥ ಹಿರೇಮಠ, ಖಜಾಂಚಿ ಶ್ರೀಕಾಂತ ಇತರರಿದ್ದರು.
ಕಾರಟಗಿ: ತಾಲೂಕಿನ ಸರ್ಕಾರಿ ನೌಕರರ ಕಾರ್ಯಕಲಾಪಗಳಿಗೆ ಅನುಕೂಲವಾಗಲು ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸ್ಥಳ ನೀಡುವಂತೆ ಒತ್ತಾಯಿಸಿ ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಶುಕ್ರವಾರ ಗ್ರೇಡ್-2 ತಹಸೀಲ್ದಾರ್ ಷಣ್ಮುಖಪ್ಪ ಅವರ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ ಮಾತನಾಡಿ, ಸರ್ಕಾರಿ ನೌಕರರು ದಿನನಿತ್ಯ ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ಜತೆಗೆ ಸಾರ್ವಜನಿಕ ಸಮಸ್ಯೆಗಳನ್ನು ಆಡಳಿತ ಯಂತ್ರದ ಗಮನಕ್ಕೆ ತಂದು ಜನಜೀವನ ಸುಧಾರಣೆಗೆ ಶ್ರಮಿಸುತ್ತಿದ್ದಾರೆ. ಸರ್ಕಾರದ ಯೋಜನೆಗಳು, ಉದ್ದೇಶಗಳು ಯಶಸ್ವಿಯಾಗುವಲ್ಲಿ ಸರ್ಕಾರಿ ನೌಕರರ ಪಾತ್ರ ಬಹುಮುಖ್ಯವಾಗಿದೆ.
ಈ ನಿಟ್ಟಿನಲ್ಲಿ ರಾಜ್ಯಾದ್ಯಂತ 6.5ಲಕ್ಷ ಸರ್ಕಾರಿ ನೌಕರರು ಆಡಳಿತ ಶಕ್ತಿ ಹಾಗೂ ಜನಸಾಮಾನ್ಯರ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಹೀಗೆ ತಾಲೂಕು ಕೇಂದ್ರದಲ್ಲಿಯೂ ನಿರಂತರವಾಗಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸರ್ಕಾರಿ ನೌಕರರ ಹಿತಾಸಕ್ತಿ ಕಾಯಲು ಹಾಗೂ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಸೂಕ್ತ ನಿವೇಶನ, ಭವನವಿಲ್ಲದಂತಾಗಿದೆ. ಸರ್ವೇ ನಂ.265ರಲ್ಲಿ ತಾಲೂಕಾಡಳಿತದಿಂದ ಗುರುತಿಸಿರುವ 12.15ಎಕರೆ ಸರ್ಕಾರಿ ಭೂಮಿಯಲ್ಲಿ 20ಗುಂಟೆ ಜಾಗವನ್ನು ಸಂಘದ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಮಂಜೂರು ಮಾಡಬೇಕೆಂದು ಮನವಿ ಮಾಡಿದರು.
ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಶಿವರಾಜಕುಮಾರ, ಪಿಡಿಒ ಸಂಘದ ಅಧ್ಯಕ್ಷ ವೆಂಕಟೇಶ ಸಂಕನಾಳ, ಶಿರಸ್ತೇದಾರ್‌ರಾದ ಜಗದೀಶ್, ಸಾವಿತ್ರಿಬಾಯಿ, ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ ಇತರರಿದ್ದರು.