ಕುಷ್ಟಗಿಯ ಬಿಜೆಪಿ ಕಚೇರಿಯಲ್ಲಿ ಬಸವ ಸಮಿತಿ ಪದಾಧಿಕಾರಿಗಳು ಶಾಸಕ ದೊಡ್ಡನಗೌಡ ಪಾಟೀಲ್‌ಗೆ ಮನವಿ ಸಲ್ಲಿಸಿದರು. ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಉಪಾಧ್ಯಕ್ಷ ಎಸ್.ಸಿ.ಪಾಟೀಲ್, ಕಾರ್ಯದರ್ಶಿ ಮಹೇಶ ಹಡಪದ ಇತರರಿದ್ದರು.
ಕುಷ್ಟಗಿ: ಪಟ್ಟಣದ ಹೃದಯ ಭಾಗದಲ್ಲಿರುವ ಬಸವ ಭವನದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ನಗರದ ಬಿಜೆಪಿ ಕಚೇರಿಯಲ್ಲಿ ಬಸವ ಸಮಿತಿ ಪದಾಧಿಕಾರಿಗಳು ವಿಪ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ್‌ಗೆ ಸೋಮವಾರ ಮನವಿ ಸಲ್ಲಿಸಿದರು.
ಭವನವನ್ನು ಸಾರ್ವಜನಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು 7 ವರ್ಷಗಳ ಹಿಂದೆ ನಿರ್ಮಾಣವಾಗಿದ್ದರೂ ಮೂಲ ಸೌಕರ್ಯಗಳ ಅಭಾವದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
3 ವರ್ಷಗಳ ಹಿಂದೆ ಪುರಸಭೆಯಿಂದ ಚರಂಡಿ ಮತ್ತು ರಸ್ತೆ ಕಾಮಗಾರಿ ನಡೆಸಲು ಭವನದ ಪಶ್ಚಿಮ ಭಾಗದ ಕಾಂಪೌಂಡ್ ತೆರವುಗೊಳಿಸಲಾಗಿದ್ದು, ಈವರೆಗೂ ನಿರ್ಮಿಸಿಲ್ಲ. ಇದರಿಂದ ಆವರಣದಲ್ಲಿ ಅಶುಚಿತ್ವ ಹೆಚ್ಚುತ್ತಿದ್ದು, ಪಶ್ಚಿಮ ಭಾಗದಲ್ಲಿ ಹೊಸ ಕಾಂಪೌಂಡ್ ನಿರ್ಮಾಣ ಜತೆಗೆ ದಕ್ಷಿಣ ಭಾಗದ ಗೋಡೆಯ ಎತ್ತರ ಹೆಚ್ಚಿಸಬೇಕಿದೆ.
ಬಸವ ಭವನದಲ್ಲಿ 2,500 ಬಸವಾದಿ ಶರಣರ ಗ್ರಂಥಗಳ ಭಂಡಾರವಿದ್ದು, ಅವುಗಳ ಸಂರಕ್ಷಣೆ ಹಾಗೂ ಸಾರ್ವಜನಿಕರ ಅಧ್ಯಯನಕ್ಕೆ ಅನುಕೂಲವಾಗುವಂತೆ ಪೂರ್ವ ಭಾಗದಲ್ಲಿ 2 ಕೊಠಡಿಗಳನ್ನು ನಿರ್ಮಿಸಬೇಕು. ಮಳೆಗಾಲದಲ್ಲಿ ಭವನದ ಸುತ್ತ ನೆಲಹಾಸು ಹಾಕಬೇಕು. ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಗೃಹ ನಿರ್ಮಾಣ ಮಾಡಬೇಕು.
ಬಸವ ಜಯಂತಿ ವೇಳೆ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದ್ದು, ಅನುದಾನ ನೀಡುವ ಭರವಸೆ ನೀಡಿದ್ದಾರೆ. 25 ಲಕ್ಷ ರೂ. ಮೊತ್ತದ ವಿಶೇಷ ಯೋಜನಾ ವರದಿಯನ್ನು ಶಾಸಕ ದೊಡ್ಡನಗೌಡ ಪಾಟೀಲ್‌ಗೆ ಹಸ್ತಾಂತರಿಸಲಾಯಿತು.
ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಉಪಾಧ್ಯಕ್ಷ ಎಸ್.ಸಿ. ಪಾಟೀಲ್, ಕಾರ್ಯದರ್ಶಿ ಮಹೇಶ ಹಡಪದ, ಜಾಗತಿಕ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಇದ್ದರು.