ತಾವರಗೇರಾದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 371 (ಜೆ) ವಿಶೇಷ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕಕ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಚಾಮರಸ ಮಾಲಿಪಾಟೀಲ್, ರಾಘವೇಂದ್ರ ಕುಷ್ಟಗಿ, ಮೀನಾಕ್ಷಿ ಬಾಳಿ, ನಜೀರಸಾಬ್ ಮೂಲಿಮನಿ, ಕೆ.ನೀಲಾ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ತಾವರಗೇರಾದಲ್ಲಿ 371 (ಜೆ) ಅಧ್ಯಯನ ಶಿಬಿರಕ್ಕೆ ತೆರೆ
ನಾಲ್ಕು ನಿರ್ಣಯ ಮಂಡನೆ
ಕುಷ್ಟಗಿ: ತಾವರಗೇರಾದ ಬುದ್ಧ ವಿಹಾರದಲ್ಲಿ ಎರಡು ದಿನ ಹಮ್ಮಿಕೊಂಡಿದ್ದ 371 (ಜೆ) ಕಲಂ ಮತ್ತು ಕೆಕೆಆರ್‌ಡಿಬಿ ಕುರಿತ ವಿಶೇಷ ಅಧ್ಯಯನ ಶಿಬಿರಕ್ಕೆ ಭಾನುವಾರ ತೆರೆ ಕಂಡಿದ್ದು, ಸೆ.7ರಂದು ಕಕ ಭಾಗದ ಏಳು ಜಿಲ್ಲಾ ಕೇಂದ್ರಗಳಲ್ಲಿ ಒಂದು ದಿನ ಧರಣಿ ಸೇರಿದಂತೆ ನಾಲ್ಕು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಮಾರೋಪ ಸಮಾರಂಭದಲ್ಲಿ ಹೋರಾಟಗಾರ ರಾಘವೇಂದ್ರ ಕುಷ್ಟಗಿ ಅವರು, ಸೆಪ್ಟೆಂಬರ್ ಮೊದಲ ವಾರ ಏಳು ಜಿಲ್ಲೆಗಳ ಚುನಾಯಿತ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವುದು, ಸೆ.7ರಂದು ಜಿಲ್ಲಾ ಕೇಂದ್ರಗಳಲ್ಲಿ ಒಂದು ದಿನ ಧರಣಿ ಹಾಗೂ ಸೆ.17ರಂದು ಕಲಬುರಗಿಯ ಕೆಕೆಆರ್‌ಡಿಬಿ ಕೇಂದ್ರ ಕಚೇರಿ ಮುಂದೆ 10 ಸಾವಿರ ಜನರೊಂದಿಗೆ ಪ್ರತಿಭಟನೆ ಹಾಗೂ ಈ ಕುರಿತು ಏಳು ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಜಾಗೃತಿ ಜಾಥಾ ಮತ್ತು ವಿದ್ಯಾರ್ಥಿಗಳಿಂದ ಪ್ರಭಾತ ಫೇರಿ ನಡೆಸುವ ಕುರಿತು ನಿರ್ಣಯ ಮಂಡಿಸಿದರು.
ಇದಕ್ಕೂ ಮುನ್ನ ಕಕ ಭಾಗದ ನೀರಾವರಿಯ ಸಮಗ್ರ ಯೋಜನೆಗಳ ಕುರಿತು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನಮಗೌಡ ಬೆಳಗುರ್ಕಿ ಮಾತನಾಡಿ, ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸುವವರಿಗೆ ಆಲಮಟ್ಟಿ ಜಲಾಶಯದ ಎತ್ತರ ಮಾಡಲು ಸಾಧ್ಯವಿಲ್ಲ. 524 ಮೀಟರ್ ಎತ್ತರಿಸಲು ಕೇಂದ್ರ ಸರ್ಕಾರ ಮನಸ್ಸು ಮಾಡಬೇಕು.
ಇಲ್ಲದಿದ್ದರೆ ಕೇವಲ ಚುನಾವಣಾ ವಿಷಯವಾಗಿ ಉಳಿಯುತ್ತದೆ ಎಂದ ಅವರು, ನವಲಿ ಸಮಾನಾಂತರ ಜಲಾಶಯ ಶೀಘ್ರವೇ ಅನುಷ್ಠಾನಗೊಳ್ಳಲು ಮೂರು ರಾಜ್ಯದ ಮುಖ್ಯಮಂತ್ರಿಗಳು ಈಗಾಗಲೇ ಸಹಮತ ವ್ಯಕ್ತಪಡಿಸಿದ್ದು, ಈ ಭಾಗದ ಜನರಲ್ಲಿ ಆಶಾಭಾವ ಮೂಡಿದೆ ಎಂದರು.
ಶೈಕ್ಷಣಿಕ ಪರಿಸ್ಥತಿ ಮತ್ತು ಪರಿಹಾರೂಪಾಯಗಳ ಕುರಿತು ಸಂಪನ್ಮೂಲ ವ್ಯಕ್ತಿ ಈ. ಧನರಾಜ ಗಂಗಾವತಿ ಮಾತನಾಡಿ, ವಿದ್ಯಾರ್ಥಿಗಳು ಯುವಕರು, 371 ( ಜೆ) ಸಮರ್ಪಕ ಜಾರಿ ಹೋರಾಟಕ್ಕೆ ಕೈ ಜೋಡಿಸಬೇಕು. ಭಾರತ ವಿಶ್ವದಲ್ಲೇ ವಿಶೇಷವಾದ ಪ್ರದೇಶ. ಅದರಲ್ಲಿ ಕರ್ನಾಟಕ ಇನ್ನೂ ವಿಶೇಷವಾಗಿದೆ.
ಕಲ್ಯಾಣ ಕರ್ನಾಟಕ ಪ್ರಗತಿ ಕಾಣಲು ಉನ್ನತ ಶಿಕ್ಷಣದ ಅಗತ್ಯತೆ ಇದೆ. ಅಸಮತೋಲನ ನಿವಾರಿಸಲು ಉತ್ತಮ ನೀತಿಗಳ ಅಭಿವೃದ್ಧಿಗೆ 20 ವರ್ಷದ ಕ್ರಿಯಾಯೋಜನೆ ಸಿದ್ಧಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಚಾಮರಸ ಮಾಲಿಪಾಟೀಲ್, ಪ್ರಮುಖರಾದ ನಜೀರಸಾಬ್ ಮೂಲಿಮನಿ, ಸಂತೋಷ ದೇಶಪಾಂಡೆ, ಕೆ.ನೀಲಾ, ಮೀನಾಕ್ಷಿ ಬಾಳಿ ಇತರರಿದ್ದರು.