ಆಧಾರ್ ತಿದ್ದುಪಡಿಗೆ ಪರದಾಟ

ಆಧಾರ್ ತಿದ್ದುಪಡಿಗಾಗಿ ನಿಂತಿರುವ ಜನ.
ಆಧಾರ್ ತಿದ್ದುಪಡಿಗಾಗಿ ನಿಂತಿರುವ ಜನ.
Published on

ಪ್ರಮುಖ ಮುಖ್ಯಾಂಶಗಳು

  • ಕನಕಗಿರಿಯಲ್ಲಿ ಒಂದೇ ಕೇಂದ್ರ
  • ಟೋಕನ್‌ಗಾಗಿ ಬೆಳಗ್ಗೆಯೇ ದೌಡಾಯಿಸುತ್ತಿರುವ ಜನ
ಕನಕಗಿರಿ: ಬಿತ್ತನೆ ಬೀಜ, ರಸಗೊಬ್ಬರ, ಪೆಟ್ರೋಲ್-ಡೀಸೆಲ್, ಗ್ಯಾಸ್ ಪಡೆಯಲು ಮುಗಿಬಿದ್ದಿದ್ದ ತಾಲೂಕಿನ ಜನತೆ ಇದೀಗ ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಪರದಾಡುವಂತಾಗಿದೆ.
ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 63 ಗ್ರಾಮಗಳಿದ್ದು, ಮೂರು ಹೋಬಳಿ ಕೇಂದ್ರಗಳಿವೆ. ಈ ಮೂರು ಹೋಬಳಿ ಕೇಂದ್ರಗಳ ಪೈಕಿ ಕನಕಗಿರಿ ನಾಡಕಚೇರಿಯಲ್ಲಿ ಮಾತ್ರ ಆಧಾರ್ ತಿದ್ದುಪಡಿ ಕೇಂದ್ರವಿದ್ದು, ಜನಸಂದಣಿ ಜಾಸ್ತಿಯಾಗುತ್ತಿದೆ. ಸದ್ಯ ಶಾಲೆಗಳು ಆರಂಭವಾಗಿದ್ದು, ಮಕ್ಕಳು ಕೂಡ ಆಧಾರ್ ತಿದ್ದುಪಡಿಗಾಗಿ ಕೇಂದ್ರದ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕಿದೆ.

40 ಜನರಿಗಷ್ಟೇ ಅವಕಾಶ

ನಿತ್ಯ ನೂರಾರು ಜನ ಇಲ್ಲಿನ ಆಧಾರ್ ಕೇಂದ್ರಕ್ಕೆ ಬರುತ್ತಿದ್ದಾರೆ. ಆದರೆ, ದಿನಕ್ಕೆ 35ರಿಂದ 40 ಜನರ ಆಧಾರ್ ತಿದ್ದುಪಡಿ ಆಗುತ್ತಿವೆ. ಜನ ಮುಗಿ ಬೀಳುವುದನ್ನು ತಪ್ಪಿಸಲು ಮೊದಲು ಬಂದ 40 ಜನರಿಗೆ ಮಾತ್ರ ಬೆಳಗ್ಗೆ ಟೋಕನ್ ನೀಡಲಾಗುತ್ತಿದ್ದು, ಟೋಕನ್‌ಗಾಗಿ ಜನ ಬೆಳಗ್ಗೆ 4 ಗಂಟೆಯಿಂದಲೇ ನಾಡಕಚೇರಿ ಮುಂದೆ ಕಾಯುತ್ತಿರುವುದು ಕಂಡುಬಂದಿದೆ.

ಹೆಚ್ಚಳವಾಗದ ಕೇಂದ್ರಗಳು

ಕಳೆದ ಹಲವು ದಿನಗಳಿಂದ ಈ ಆಧಾರ್ ಕಾರ್ಡ್ ಕೇಂದ್ರದಲ್ಲಿ ಜನ ಮುಗಿ ಬೀಳುತ್ತಿರುವುದರಿಂದ ಆಧಾರ್ ಕಾರ್ಡ್ ಕೇಂದ್ರಗಳನ್ನು ತೆರೆಯಲು ನಾನಾ ಸಂಘಟನೆಗಳು ಆಗ್ರಹಿಸಿವೆ. ತಾಲೂಕಿನ ಸುಳೇಕಲ್‌ನಲ್ಲಿದ್ದ ತಿದ್ದುಪಡಿ ಕೇಂದ್ರವನ್ನು ಮುಚ್ಚಲಾಗಿದೆಯೇ ಹೊರತು ಇದುವರೆಗೂ ಹೊಸದಾಗ ತೆರೆಯಲು ಅಧಿಕಾರಿಗಳು ಮುಂದಾಗಿಲ್ಲ. ಈಗ ಮುಂಗಾರು ಆರಂಭವಾಗಿದೆ. ರೈತಾಪಿ ವರ್ಗ ಕೃಷಿ ಕಾರ್ಯಗಳನ್ನು ಬಿಟ್ಟು, ವಿದ್ಯಾರ್ಥಿಗಳು ಶಾಲೆ ಬಿಟ್ಟು ಆಧಾರ್ ತಿದ್ದುಪಡಿಗೆ ಕಾಯುವಂತಾಗಿದೆ ಎನ್ನುವುದು ಸಾರ್ವಜನಿಕರ ಆಕ್ರೋಶ.

ನೆರಳಿನ ವ್ಯವಸ್ಥೆ ಇಲ್ಲ

ಆಯಾ ದಿನದ ಟೋಕನ್ ಪಡೆದು ಆಧಾರ್ ತಿದ್ದುಪಡಿಗಾಗಿ ಸರತಿ ನಿಲ್ಲಬೇಕಿರುವ ಜನ ಬಿಸಿಲು ಕಾರಣ ತಮ್ಮ ಆಧಾರ್ ಕಾರ್ಡ್ ಹಾಗೂ ಕೈಚೀಲಗಳನ್ನು ಸರತಿಯಲ್ಲಿ ಇಡುತ್ತಿದ್ದಾರೆ. ನಾಡಕಚೇರಿ ಬಳಿ ನೆರಳಿನ ವ್ಯವಸ್ಥೆ ಇಲ್ಲವಾದ್ದರಿಂದ ಜನ ಬದಿಗೆ ಕೂಡುವಂತಾಗಿದೆ. ಈ ವಿಡಿಯೋ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
"

ಆಧಾರ್ ತಿದ್ದುಪಡಿ ಸಮಸ್ಯೆ ಗಮನಕ್ಕೆ ಬಂದಿದೆ. ಅದಕ್ಕಾಗಿ ಶಾಲಾ-ಕಾಲೇಜುಗಳಲ್ಲಿ ಆಧಾರ್ ತಿದ್ದುಪಡಿಗಾಗಿಯೇ ವಿಶೇಷ ಕ್ಯಾಂಪ್‌ಗಳನ್ನು ಹಮ್ಮಿಕೊಂಡು ಅನುಕೂಲ ಮಾಡಿಕೊಡಲಾಗುವುದು.

— ಡಾ. ಸುರೇಶ ಬಿ.ಇಟ್ನಾಳ ಜಿಲ್ಲಾಧಿಕಾರಿ, ಕೊಪ್ಪಳ
"

ತಾಲೂಕಿಗೊಂದೇ ಆಧಾರ್ ಸೇವಾ ಕೇಂದ್ರವಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಹೆಚ್ಚಿನ ಕೇಂದ್ರಗಳನ್ನು ತೆರೆದು ಜನರಿಗೆ ಅನುಕೂಲ ಮಾಡಿಕೊಡಲು ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದೇವೆ. ಆದರೂ ಕ್ರಮವಾಗಿಲ್ಲ. ಈಗಲಾದರೂ ಹೆಚ್ಚಳ ಮಾಡಲು ಅಧಿಕಾರಿಗಳು ಮುಂದಾಗಬೇಕು.

— ಪಾಮಣ್ಣ ಅರಳಿಗನೂರು ಪ್ರಗತಿಪರ ಮುಖಂಡ, ಕನಕಗಿರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net