ಕಾನೂನು ಪಾಲಿಸಲು ನೀನೇ ಬೇಕೆ..?

ಕಾರಟಗಿ ಪುರಸಭೆಯಲ್ಲಿ ಅಧ್ಯಕ್ಷ ಮಂಜುನಾಥ ಮೇಗೂರು ಅಧಿಕಾರ ದುರುಪಯೋಗ ಹಾಗೂ ದರ್ಪ ತೋರುತ್ತಿದ್ದಾರೆಂದು ಆರೋಪಿಸಿ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ಸಿಬ್ಬಂದಿಗಳೊಂದಿಗೆ ಬುಧವಾರ ದಿಢೀರ್ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾರಟಗಿ ಪುರಸಭೆಯಲ್ಲಿ ಅಧ್ಯಕ್ಷ ಮಂಜುನಾಥ ಮೇಗೂರು ಅಧಿಕಾರ ದುರುಪಯೋಗ ಹಾಗೂ ದರ್ಪ ತೋರುತ್ತಿದ್ದಾರೆಂದು ಆರೋಪಿಸಿ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ಸಿಬ್ಬಂದಿಗಳೊಂದಿಗೆ ಬುಧವಾರ ದಿಢೀರ್ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾರಟಗಿ ಪುರಸಭೆ ಮುಖ್ಯಾಧಿಕಾರಿಗೆ ಅಧ್ಯಕ್ಷ ಪ್ರಶ್ನೆ
  • ತಾನು ಹೇಳಿದಂತೆ ಕೆಲಸ ಮಾಡುವುದಾದರೆ ಮಾತ್ರ ಇರು ಎಂದು ಬೆದರಿಕೆ
  • ಸಿಬ್ಬಂದಿಯೊಂದಿಗೆ ಮುಖ್ಯಾಧಿಕಾರಿ ದಿಢೀರ್ ಪ್ರತಿಭಟನೆ
ಕಾರಟಗಿ: ಪುರಸಭೆ ಅಧ್ಯಕ್ಷ ಮಂಜುನಾಥ್ ಮೇಗೂರು ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಜತೆಗೆ ಸಿಬ್ಬಂದಿ ಮೇಲೆ ನಿರಂತರ ದರ್ಪ ತೋರುತ್ತಿದ್ದರಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿ ಪುರಸಭೆ ಮುಖ್ಯಾಧಿಕಾರಿಯೇ ಸಿಬ್ಬಂದಿಗಳೊಂದಿಗೆ ಬುಧವಾರ ದಿಢೀರ್ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಕಚೇರಿ ಮುಂದೆ ಕರ್ತವ್ಯ ಸ್ಥಗಿತಗೊಳಿಸಿ ದಿಢೀರ್ ಧರಣಿ ಕುಳಿತ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ಹಾಗೂ ಸಿಬ್ಬಂದಿ, ಅಧ್ಯಕ್ಷ ಮಂಜುನಾಥ ಮೇಗೂರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. ಕಳೆದ ನಾಲ್ಕೈದು ತಿಂಗಳಿನಿಂದ ಆಡಳಿತಾತ್ಮಕ ವಿಚಾರದಲ್ಲಿಯೂ ನಿರಂತರ ಹಸ್ತಕ್ಷೇಪ ಮಾಡುತ್ತಿರುವ ಅಧ್ಯಕ್ಷ, ಪ್ರತಿ ಕೆಲಸಕ್ಕೂ ತಮ್ಮ ಅನುಮತಿ ಪಡೆದುಕೊಳ್ಳಬೇಕೆಂದು ಅಡ್ಡಿಯುಂಟು ಮಾಡುತ್ತಿದ್ದಾರೆ. ಅಲ್ಲದೇ, ತಾವು ಹೇಳಿದ ಕೆಲಸವನ್ನು ಯಾವುದೇ ಕಾನೂನು ಮತ್ತು ನಿಯಮಗಳನ್ನು ಪಾಲಿಸದೆಯೇ ಮಾಡಿಕೊಡಬೇಕು. ಕಾನೂನು ಪಾಲಿಸಲು ನೂರಾರು ಅಧಿಕಾರಿಗಳು ಸಿಗುತ್ತಾರೆ. ಅದಕ್ಕೆ ನೀನೇ ಬರಬೇಕಾಗಿಲ್ಲ. ನಾನು ಹೇಳಿದಂತೆ ಕೆಲಸ ಮಾಡಬೇಕು, ಇಲ್ಲವಾದಲ್ಲಿ ನನ್ನ ಅನುಮತಿಯಿಲ್ಲದೇ ಅದು ಹೇಗೆ ಕಾರಟಗಿಯಲ್ಲಿ ಕೆಲಸ ಮಾಡುತ್ತೀಯಾ ನಾನು ನೋಡುತ್ತೇನೆ? ಎಂಟು ದಿನಗಳಲ್ಲಿ ನಿಮ್ಮನ್ನು ಏನು ಮಾಡುತ್ತೇನೆ ನೋಡುತ್ತಿರಿ ಎಂದು ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದರು. ಇನ್ನು, ಬ್ಯಾನರ್ ಅಳವಡಿಸಲು ಕೂಡಾ ಬೇಕಾದವರಿಗೆ ಯಾವುದೇ ಟ್ಯಾಕ್ಸ್ ಪಡೆಯುವಂತಿಲ್ಲ ಎಂದು ತಾಕೀತು ಮಾಡುತ್ತಿದ್ದಾರೆಂದು ಆರೋಪಿಸಿದರು.
ಒಂದು ಹಂತದಲ್ಲಿ ತೀವ್ರ ಆಕ್ರೋಶಗೊಂಡ ಮುಖ್ಯಾಧಿಕಾರಿ ಸಾಬಣ್ಣ, ಅಧ್ಯಕ್ಷ ಗೂಂಡಾ ವರ್ತನೆ ತೋರುತ್ತಿದ್ದು, ಗೂಂಡಾ ಅಧ್ಯಕ್ಷನಿಗೆ ಪುರಸಭೆ ಬರೆದುಕೊಟ್ಟಂತಾಗಿದೆ. ಇಲ್ಲಿ ಕೆಲಸವೇ ಮಾಡುವುದಿಲ್ಲ, ಈಗಾಗಲೇ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದು, ಇಲ್ಲಿಂದ ಮನೆ ಖಾಲಿ ಮಾಡಿಕೊಂಡು ಹೋಗುತ್ತೇನೆ ಎಂದು ಭಾವೋದ್ವೇಗಕ್ಕೊಳಗಾದರು. ಈ ವೇಳೆ ಸಚಿವ ತಂಗಡಗಿಯವರ ಆಪ್ತ ಸಹಾಯಕ ಹಾಗೂ ಕೆಲವರು ಮುಖ್ಯಾಧಿಕಾರಿಯನ್ನು ಸಮಾಧಾನಪಡಿಸಲು ಮುಂದಾದರು.
"

ನಿರಂತರವಾಗಿ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜನತೆಗೆ ಸೇವೆ ಒದಗಿಸುತ್ತಿದ್ದೇವೆ. ಆದರೆ ಪುರಸಭೆ ಅಧ್ಯಕ್ಷರ ಅಧಿಕಾರ ದುರುಪಯೋಗ ಹಾಗೂ ದರ್ಪ ನಮ್ಮ ನೈತಿಕ ಸ್ಥೈರ್ಯ ಕುಗ್ಗಿಸಿದೆ. ಹೀಗಾಗಿ ಸಚಿವರು ಹಾಗೂ ಮೇಲಧಿಕಾರಿಗಳ ಬಳಿ ನನ್ನ ನೋವನ್ನು ತೋಡಿಕೊಂಡಿದ್ದೇನೆ. ಅವರು ಏನು ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡುತ್ತೇನೆ.

— ಸಾಬಣ್ಣ ಕಟ್ಟಿಕಾರ್ ಪುರಸಭೆ ಮುಖ್ಯಾಧಿಕಾರಿ, ಕಾರಟಗಿ
"

ವಿನಾಕಾರಣ ಸುಳ್ಳು ಆರೋಪಗಳನ್ನು ಮಾಡುತ್ತಾ ತೇಜೋವಧೆ ಮಾಡುತ್ತಿದ್ದಾರೆ. ನಾನು ಯಾರಿಗೂ ಅವಾಚ್ಯ ಪದಗಳಿಂದ ನಿಂದಿಸಿಲ್ಲ. ದಾಖಲೆಗಳಿದ್ದರೆ ತೋರಿಸಲಿ.

— ಮಂಜುನಾಥ ಮೇಗೂರು ಪುರಸಭೆ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net