ಕೇರಳ ಸರ್ಕಾರದ ಕ್ರಮ ಖಂಡಿಸಿ ಕನ್ನಡ ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಗಂಗಾವತಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಚನ್ನಬಸವ ಜೇಕಿನ್, ತಾಲೂಕಾಧ್ಯಕ್ಷ ಮಂಜುನಾಥ ಪತ್ತಾರ್,ಪದಾಧಿಕಾರಿಗಳಾದ ಆದಿಲ್ ಪಾಷಾ, ಆನಂದ ಸಂಗಾಪುರ ಇತರರಿದ್ದರು.
ಗಂಗಾವತಿ: ರಾಜ್ಯದ ಗಡಿಭಾಗ ಕಾಸರಗೋಡು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯಗೊಳಿಸಿರುವ ಕೇರಳ ಸರ್ಕಾರದ ಕ್ರಮ ಖಂಡಿಸಿ ಕನ್ನಡ ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ತಾಲೂಕಾಡಳಿತ ಸೌಧದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಮನವಿ ಸಲ್ಲಿಸಿದರು.
ತಾಲೂಕಾಧ್ಯಕ್ಷ ಮಂಜುನಾಥ ಪತ್ತಾರ್ ಮಾತನಾಡಿ, ಶೇ.90 ಕನ್ನಡಿಗರಿರುವ ಕಾಸರಗೋಡು ಭಾಗದಲ್ಲಿ ಕೇರಳ ಸರ್ಕಾರ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆ ಕಡ್ಡಾಯಗೊಳಿಸುವ ಮಸೂದೆ ಜಾರಿ ಮಾಡಿದ್ದು ಸರಿಯಲ್ಲ. ಕನ್ನಡಿಗರು ಬಹುಸಂಖ್ಯಾತರಿರುವ ಕಾಸರಗೋಡುನಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕಿದ್ದು, ಅನ್ಯ ಭಾಷೆ ಹೇರುವ ಹುನ್ನಾರ ನಡೆಸಬಾರದು. ಸಂವಿಧಾನದಲ್ಲಿ ಭಾಷೆ ಉಳಿಸಲು ಕಾಯ್ದೆ ಮಾಡಿಕೊಳ್ಳಬಹುದು. ಭಾಷಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಕಾಯ್ದೆ ರೂಪಿಸಬೇಕಿದೆ. ಭಾಷಾ ವಿವಾದದಿಂದ ರಾಜ್ಯದ ನಡುವೆ ಬಿಕ್ಕಟ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು, ರಾಜ್ಯ ಸರ್ಕಾರ ಕೇರಳ ಸರ್ಕಾರದೊಂದಿಗೆ ಸಮನ್ವಯ ಸಾಧಿಸಬೇಕಿದೆ. ಗಡಿಭಾಗದ ಕನ್ನಡಿಗ ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆಯಾಗದಂತೆ ಜಾಗೃತಿ ವಹಿಸಬೇಕಿದೆ ಎಂದರು.