ಪಡಿತರ ವಿತರಕರನ್ನು ಅಮಾನತು ಮಾಡಲಿ

ಕುಷ್ಟಗಿ ಸಮೀಪದ ಹುಲಿಯಾಪುರ ಗ್ರಾಮಸ್ಥರು ಆಹಾರ ಇಲಾಖೆ ಶಿರಸ್ತೇದಾರ್ ಚನ್ನಬಸಪ್ಪ ಹಟ್ಟಿ, ಆಹಾರ ನಿರೀಕ್ಷಕ ರಮೇಶ ತಾಳಕೇರಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ರಮೇಶ್, ಕರೀಂಸಾಬ್, ಹುಸೇನ್‌ಸಾಬ್ ಇತರರಿದ್ದರು.
ಕುಷ್ಟಗಿ ಸಮೀಪದ ಹುಲಿಯಾಪುರ ಗ್ರಾಮಸ್ಥರು ಆಹಾರ ಇಲಾಖೆ ಶಿರಸ್ತೇದಾರ್ ಚನ್ನಬಸಪ್ಪ ಹಟ್ಟಿ, ಆಹಾರ ನಿರೀಕ್ಷಕ ರಮೇಶ ತಾಳಕೇರಿಗೆ ಮನವಿ ಸಲ್ಲಿಸಿದರು. ಪ್ರಮುಖರಾದ ರಮೇಶ್, ಕರೀಂಸಾಬ್, ಹುಸೇನ್‌ಸಾಬ್ ಇತರರಿದ್ದರು.
Published on
ಕುಷ್ಟಗಿ: ತಾಲೂಕಿನ ಹುಲಿಯಾಪುರ ನ್ಯಾಯಬೆಲೆ ಅಂಗಡಿ ಮಾಲೀಕರು ಸಮರ್ಪಕವಾಗಿ ಪಡಿತರ ವಿತರಿಸುತ್ತಿಲ್ಲ. ಹೀಗಾಗಿ ತಕ್ಷಣ ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.
ಕರವೇ ಗ್ರಾಮ ಘಟಕ ಅಧ್ಯಕ್ಷ ಯಮನೂರಪ್ಪ ಬನ್ನಿಗೋಳ ಮಾತನಾಡಿ, ಕಾರ್ಡ್‌ದಾರರಿಗೆ ಸರ್ಕಾರದ ನಿಯಮಾವಳಿ ಪ್ರಕಾರ ಅಂತ್ಯೋದಯ ಅನ್ನ ಯೋಜನೆಯಡಿ ಪ್ರತಿ ಕಾರ್ಡ್‌ಗೆ ಮೇ ಮತ್ತು ಜೂನ್ ತಿಂಗಳ ತಲಾ 35 ಕೆಜಿಯಂತೆ ಒಟ್ಟು 70 ಕೆಜಿ ಅಕ್ಕಿಯನ್ನು ಒಟ್ಟಿಗೆ ವಿತರಿಸಬೇಕಾಗಿದೆ. ಆದರೆ, ಹುಲಿಯಾಪುರ ಗ್ರಾಮದ 150 ಅಂತ್ಯೋದಯ ಕಾರ್ಡ್‌ದಾರರಿಗೆ 70 ಕೆ.ಜಿ ಬದಲಿಗೆ ಕೇವಲ 35 ಕೆಜಿ ಹಾಗೂ 50 ಕೆಜಿ ಮಾತ್ರ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ನಗದು ವರ್ಗಾವಣೆ ಇಲ್ಲದ ಕಾರಣ ಮೇ ಮತ್ತು ಜೂನ್ ತಿಂಗಳು ರಾಜ್ಯ ಹಾಗೂ ಕೇಂದ್ರದ ತಲಾ 5 ಕೆಜಿ ಸೇರಿ ಒಟ್ಟು ಪಡಿತರವನ್ನು ಪ್ರತ್ಯೇಕ ಬಯೋಮೆಟ್ರಿಕ್ ಪಡೆದು ವಿತರಿಸಬೇಕಾದ ನಿಯಮವನ್ನು ಇಲ್ಲಿ ಗಾಳಿಗೆ ತೂರಲಾಗಿದೆ ಎಂದು ದೂರಿದರು.
ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಕರು ಸಮಯಕ್ಕೆ ಸರಿಯಾಗಿ ಆಗಮಿಸುತ್ತಿಲ್ಲ. ಅಂಗಡಿಮುಂದೆ ಸಿಸಿ ಕ್ಯಾಮರಾ ಅಳವಡಿಸಬೇಕು. ಆಹಾರ ಸಾಮಗ್ರಿಗಳನ್ನು ವಿತರಿಸುವ ಮುನ್ನ ಗುಣಮಟ್ಟ ಪರಿಶೀಲಿಸಬೇಕು. ಸ್ಥಳೀಯ ಆಡಳಿತ ನಿಗದಿತ ಸಮಯಕ್ಕೆ ಪಡಿತರ ವಿತರಣೆಯಾಗುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಕುಷ್ಟಗಿ ಆಹಾರ ಇಲಾಖೆ ಶಿರಸ್ತೇದಾರ್ ಚನ್ನಬಸಪ್ಪ ಹಟ್ಟಿ, ಆಹಾರ ನಿರೀಕ್ಷಕ ರಮೇಶ ತಾಳಕೇರಿ ಮಾತನಾಡಿ, ಪಡಿತರ ವಿತರಣೆಯಲ್ಲಿ ಲೋಪ ಎಸಗಿರುವುದು ಪ್ರಾಥಮಿಕವಾಗಿ ಕಂಡು ಬಂದಿದ್ದು, ಕೂಡಲೇ ತನಿಖೆ ನಡೆಸಿ ಹಂಚಿಕೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ತಕ್ಷಣ ಅಮಾನತುಗೊಳಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು. ಪ್ರಮುಖರಾದ ಯಮನೂರಸಾಬ್ ಕಂಬಾರ, ಫಕೀರಪ್ಪ, ರಮೇಶ್, ಕರೀಂಸಾಬ್, ಹುಸೇನ್‌ಸಾಬ್, ನಾಗಪ್ಪ, ಸುರೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net