ಮದ್ಯ ಅಕ್ರಮ ಮಾರಾಟ ಮತ್ತು ಇಸ್ಪೀಟ್ ಜೂಜಾಟ ನಿಯಂತ್ರಿಸುವಂತೆ ಒತ್ತಾಯಿಸಿ ಚಿಕ್ಕಜಂತಕಲ್ ಗ್ರಾಮಸ್ಥರು ಗಂಗಾವತಿ ಹೆಚ್ಚುವರಿ ಎಎಸ್ಪಿ ಹೇಮಂತಕುಮಾರಗೆ ಮಂಗಳವಾರ ಮನವಿ ಸಲ್ಲಿಸಿದರು. ಜಿಪಂ ಮಾಜಿ ಸದಸ್ಯ ಎಚ್.ಪರಶುರಾಮಪ್ಪ, ಪ್ರಮುಖರಾದ ವೈ. ಮಂಜುನಾಥ, ಕೃಷ್ಣಾ, ಹುಲುಗಪ್ಪ ಹೊಸ್ಕೇರಿ, ದೊಡ್ಡರಾಮಮ್ಮ, ಪೂಜಾರಿ ದ್ಯಾವಮ್ಮ ಇತರರಿದ್ದರು.
ಗಂಗಾವತಿ: ತಾಲೂಕಿನ ಚಿಕ್ಕಜಂತಕಲ್ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಮದ್ಯ ಅಕ್ರಮ ಮಾರಾಟ ಮತ್ತು ಇಸ್ಪೀಟ್ ಜೂಜಾಟ ನಿಯಂತ್ರಿಸುವಂತೆ ಒತ್ತಾಯಿಸಿ ಚಿಕ್ಕಜಂತಕಲ್ ಗ್ರಾಮಸ್ಥರು ನಗರದ ಡಿವೈಎಸ್ಪಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ಹೆಚ್ಚುವರಿ ಎಎಸ್ಪಿ ಹೇಮಂತಕುಮಾರಗೆ ಮನವಿ ಸಲ್ಲಿಸಿದರು.
ಜಿಪಂ ಮಾಜಿ ಸದಸ್ಯ ಎಚ್.ಪರಶುರಾಮಪ್ಪ ಮಾತನಾಡಿ, ಚಿಕ್ಕಜಂತಕಲ್ ಗ್ರಾಪಂ ವ್ಯಾಪ್ತಿಯ ಚಿಕ್ಕಜಂತಕಲ್, ವಿನೋಬಾನಗರ, ನಾಗರಹಳ್ಳಿಯಲ್ಲಿ ಮದ್ಯ ಅಕ್ರಮ ಮಾರಾಟ ಹೆಚ್ಚುತ್ತಿದ್ದು, ಕುಡುಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ನಿತ್ಯವೂ ಜಗಳವಾಗುತ್ತಿದ್ದು, ವಯಸ್ಸಿನ ಯುವಕರು ಹಾಳಾಗುತ್ತಿದ್ದಾರೆ. ಇಸ್ಪೀಟ್ ಜೂಜಾಟದಿಂದ ಹಲವು ಕುಟುಂಬಗಳು ಬೀದಿಗೆ ಬಂದಿವೆ. ಇದರಿಂದ ಮಾನಸಿಕ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಕೂಡಲೇ ನಿಯಂತ್ರಿಸುವಂತೆ ಒತ್ತಾಯಿಸಿದರು.
ಪ್ರಮುಖರಾದ ವೈ. ಮಂಜುನಾಥ, ಕೃಷ್ಣಾ, ಹುಲುಗಪ್ಪ ಹೊಸ್ಕೇರಿ, ವಿರುಪಣ್ಣ, ರುದ್ರಪ್ಪ, ಶರಣಪ್ಪ, ದೊಡ್ಡರಾಮಮ್ಮ, ಪೂಜಾರಿ ದ್ಯಾವಮ್ಮ, ಹುಲಿಗೆಮ್ಮ, ಈರಮ್ಮ ಸೇರಿದಂತೆ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಮಹಿಳೆಯರಿದ್ದರು.