ಕನಕಗಿರಿ ಶ್ರೀ ಕನಕಾಚಲಪತಿ ದೇವಸ್ಥಾನದ ಜಾಗ ರಕ್ಷಣೆಗೆ ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡಗೆ ಸಾರ್ವಜನಿಕರು ಹಾಗೂ ಹಿಂದೂ ಪರ ಸಂಘಟನೆಗಳ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು. ಪ್ರಮುಖರಾ ನರಸಪ್ಪ ನಾಯಕ, ಯಂಕಾರೆಡ್ಡಿ ಓಣಿಮನಿ, ಪ್ರಕಾಶ ತೆಂಗಿನಕಾಯಿ, ಬಿ.ಕನಕಪ್ಪ ಇತರರಿದ್ದರು.
ಕನಕಗಿರಿ: ಪಟ್ಟಣದ ಐತಿಹಾಸಿಕ ಶ್ರೀ ಕನಕಾಚಲಪತಿ ದೇವಸ್ಥಾನ ಸುತ್ತಲಿನ ಜಾಗವನ್ನು ರಕ್ಷಣೆ ಮಾಡುವಂತೆ ಆಗ್ರಹಿಸಿ ಸಾರ್ವಜನಿಕರು ಹಾಗೂ ಹಿಂದೂ ಪರ ಸಂಘಟನೆ ಪದಾಧಿಕಾರಿಗಳು ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡಗೆ ಸೋಮವಾರ ಮನವಿ ಸಲ್ಲಿಸಿದರು.
ಹಿಂದೂ ಪರ ಸಂಘಟನೆಯ ಪ್ರಮುಖ ಅಯ್ಯನಗೌಡ ಅಳ್ಳಳ್ಳಿ ಮಾತನಾಡಿ, ಕನಕಾಚಲಪತಿ ದೇವಸ್ಥಾನ ಸುತ್ತಲಿನ ಜಾಗವನ್ನು ಸರ್ವೇ ಮಾಡಿ ಹದ್ದುಬಸ್ತು ಮಾಡಬೇಕು ಹಾಗೂ ದೇವಸ್ಥಾನ ಹೆಸರಿನಲ್ಲಿ ಎಲ್ಲೆಲ್ಲಿ ಎಷ್ಟು ಆಸ್ತಿ ಇದೆ ಎಂದು ಪತ್ತೆ ಹಚ್ಚಿ ವಶಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಅಧ್ಯಕ್ಷ ಗಣೇಶ ರೆಡ್ಡಿ ಮಾತನಾಡಿ, ದೇವಸ್ಥಾನ ಬಲ ಭಾಗದ ಜಾಗವನ್ನು ವ್ಯಾಪಾರ ಮಳಿಗೆಗಳಿಗೆ ನೀಡಿದ್ದು, ಅನೇಕ ವರ್ಷಗಳಿಂದ ಬಾಡಿಗೆ ಸಮರ್ಪಕವಾಗಿ ನೀಡಿಲ್ಲ ಜತೆಗೆ ಮಳಿಗೆಗಳನ್ನು ಬಾಡಿಗೆ ಪಡೆದು ಹೆಚ್ಚಿನ ದರದಲ್ಲಿ ಉಪ ಬಾಡಿಗೆ ನೀಡುತ್ತಿರುವುದು ಖಂಡನೀಯ. ಮೂರು ವರ್ಷಗಳಿಗೊಮ್ಮೆ ಮಳಿಗೆ ಬಾಡಿಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಪ್ರತಿ ವರ್ಷ ಯುಗಾದಿ ನಂತರ ತೆಂಗಿನಕಾಯಿ, ಸಂತೆ, ಕುಂಕುಮ ಇತರ ವ್ಯಾಪಾರಕ್ಕೆ ಹರಾಜು ಮಾಡಲಾಗುತ್ತಿದ್ದು, ಯುಗಾದಿ ಮುಗಿದು 10 ದಿನ ಕಳೆದರೂ ಹರಾಜು ಮಾಡಿಲ್ಲ. ಹಳೆಯ ಹರಾಜುದಾರರೇ ವ್ಯಾಪಾರ ಮಾಡುತ್ತಿದ್ದು, ಅದನ್ನು ರದ್ದುಗೊಳಿಸಿ ದೇವಸ್ಥಾನದಿಂದ ಕಾಯಿ, ಸಂತೆ ಹರಾಜು ವ್ಯಾಪಾರ ಮಾಡಬೇಕು. ಸರ್ವೇ ಮಾಡಿದ ನಂತರ ದೇವಸ್ಥಾನದಲ್ಲಿನ ನಾನಾ ವ್ಯಾಪಾರ ವಹಿವಾಟಿನ ಹರಾಜು ಮಾಡಬೇಕು ಎಂದು ಆಗ್ರಹಿಸಿದರು.
ಹುಲಿಗೆಮ್ಮ ದೇವಸ್ಥಾನ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ, ದೇವಸ್ಥಾನ ಕಾರ್ಯದರ್ಶಿ ಸಿದ್ಧಲಿಂಗಯ್ಯ ಸ್ವಾಮಿ, ಪ್ರಮುಖರಾದ ಹನುಮಂತರೆಡ್ಡಿ, ವೆಂಕಟೇಶ ವಕೀಲ, ವಿಷ್ಣುವರ್ಧನ ರೆಡ್ಡಿ, ನರಸಪ್ಪ ನಾಯಕ, ಯಂಕಾರೆಡ್ಡಿ ಓಣಿಮನಿ, ಪ್ರಕಾಶ ತೆಂಗಿನಕಾಯಿ, ಬಿ.ಕನಕಪ್ಪ ಇತರರಿದ್ದರು.